ಬೆಂಗಳೂರು - ಪೊಲೀಸ್ ಇಲಾಖೆಯ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದಲೇ ವಜಾಗೊಳಿಸಲಾ ಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ. ಭ್ರಷ್ಟಚಾರವನ್ನು ತಮ ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕೆ. ಶಿವಕುಮಾರ್ ಎಂಬುವರು ತಮ ಮಗಳ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಸೇರಿದಂತೆ ವಿವಿಧ ಕೆಲಸಗಳಿಗೆ ಯಾವ ರೀತಿ ಲಂಚ ವಸೂಲಿ ಮಾಡಲಾಯಿತು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದರು.
ಇದಕ್ಕೆ ಸಂಬಂಧಪಟ್ಟಂತೆ ಬೆಳಂದೂರು ಪೊಲೀಸ್‌ಠಾಣೆಯ ಸಬ್ ಇನ್‌್ಸಪೆಕ್ಟರ್ ಮತ್ತು ಕಾನ್‌್ಸಟೆಬಲ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವ ಪರಮೇಶ್ವರ್, ಪೊಲೀಸ್ ಇಲಾಖೆ ಮಾತ್ರವಲ್ಲದೆ ಸರ್ಕಾರದ ಯಾವುದೇ ಇಲಾಖೆಯಲ್ಲಾದರೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಪಡೆದಿದ್ದರೆ ಅದನ್ನು ಸಹಿಸುವುದಿಲ್ಲ. ಕಠಿಣಕ್ರಮ ಕೈಗೊಳ್ಳುತ್ತೇವೆ ಎಂದರು. ಅದರಲ್ಲೂ ಪ್ರಮುಖವಾಗಿ ಪೊಲೀಸ್ ಇಲಾಖೆಯಲ್ಲಿ ಲಂಚ ಪಡೆದಿದ್ದರೆ ಅದು ಸಾವಿರ ಇರಲಿ, ಐದುನೂರೆ ಇರಲಿ ತಕ್ಷಣವೇ ಅಮಾನತಿನಂತಹ ಕ್ರಮ ಕೈಗೊಂಡು ಇಲಾಖೆಯ ವಿಚಾರಣೆ ನಡೆಸಲಾಗುವುದು. ತನಿಖೆಯಲ್ಲಿ ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದಲೇ ವಜಾಗೊಳಿಸಲಾಗುತ್ತದೆ ಎಂದರು. ಇಂತಹ ಪ್ರಕರಣಗಳು ನಮಗಾಗಲೀ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದರೆ ತಕ್ಷಣವೇ ನಿರ್ಧಾಕ್ಷೀಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಸಮಾವೇಶ ಹಾಗೂ ಇತರ ಸಭೆಗಳಲ್ಲಿ ಸೂಚನೆ ನೀಡಿದ್ದೇವೆ. ಮುಖ್ಯಮಂತ್ರಿ ಕೂಡ ಸ್ಪಷ್ಟ ಆದೇಶ ನೀಡಿದ್ದಾರೆ. ಭ್ರಷ್ಟಚಾರವನ್ನು ಯಾವುದೇ ಹಂತದಲ್ಲೂ ತಾವು ಬೆಂಬಲಿಸುವುದಿಲ್ಲ ಎಂದು ಹೇಳಿದರು.
ಒಳ ಮೀಸಲಾತಿ ವಿಚಾರವಾಗಿ ಹಿಂದಿನ ಸರ್ಕಾರ ಗೊಂದಲ ಮೂಡಿಸಿತ್ತು. ಅದನ್ನು ಸರಿಪಡಿಸಿ, ಕಾನೂನಿಗೆ ಬಲ ನೀಡಲು ನಮ ಸರ್ಕಾರ ಮುಂದಾಗಿದೆ. ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ನಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಲ್ಲಿ ಯಾವುದೇ ಗೊಂದಲಗಳಿಲ್ಲ. ಎ,ಬಿ,ಸಿ,ಡಿ ಎಂಬ ವರ್ಗೀಕರಣ ಮಾಡಿ ಒಳ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿ ನಂತರ ಕಾನೂನು ರೂಪಿಸಿ, ಜಾರಿಗೊಳಿಸಲು ಚರ್ಚಿಸಲಾಗಿತ್ತು. ಆದರೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಗ್ರೀವಾಜ್ಞೆ ಬದಲಾಗಿ ಕಾನೂನು ರೂಪಿಸಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕಾನೂನು ಸಚಿವರಿಗೆ ಸೂಚನೆ ನೀಡಲಾಗಿದೆೆ ಎಂದರು. ಬಿಜೆಪಿಯ ಸಂಸದ ಗೋವಿಂದ ಕಾರಜೋಳ ಅವರಿಗೆ ಒಳ ಮೀಸಲಾತಿ ವಿಚಾರ ಅರ್ಥವಾಗಿಲ್ಲ. ಅವರ ಸರ್ಕಾರ ಆಡಳಿತದಲ್ಲಿ ಸಾಕಷ್ಟು ಗೊಂದಲ ಮೂಡಿಸಿತ್ತು. ನಾವು ಅದನ್ನು ಸರಿಪಡಿಸಿ ಮತ್ತು ಕಾನೂನಿನ ಶಕ್ತಿ ನೀಡಲು ಮುಂದಾಗಿದ್ದೇವೆ ಎಂದರು.