image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಂಪುಟ ಸಭೆಯಲ್ಲಿ ಕಿತ್ತಾಡಿಕೊಂಡ ಸಚಿವ ಜಾರ್ಜ್ ಮತ್ತು ಎಚ್.ಸಿ. ಮಹದೇವಪ್ಪ

ಸಂಪುಟ ಸಭೆಯಲ್ಲಿ ಕಿತ್ತಾಡಿಕೊಂಡ ಸಚಿವ ಜಾರ್ಜ್ ಮತ್ತು ಎಚ್.ಸಿ. ಮಹದೇವಪ್ಪ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆ ಕುರಿತ ಚರ್ಚೆಯ ವೇಳೆ ಸಚಿವರುಗಳ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ. ಗೃಹ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಸಿ. ಮಹದೇವಪ್ಪ ಅವರ ನಡುವೆ ನಡೆದ ಈ ವಾಗ್ವಾದದಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಆಯ್ತು. ಸಭೆಯ ಅಜೆಂಡಾದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ-ಟಿಎಸ್‌ಪಿ ಅನುದಾನದಿಂದ ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ವಿಚಾರ ಚರ್ಚೆಗೆ ಬಂದಿತ್ತು. ಈ ಯೋಜನೆಯಡಿ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆದು, ಪಂಪ್ ಸೆಟ್ ಹಾಗೂ ನೀರಿನ ಸಂಪರ್ಕ ಒದಗಿಸುವ ಉದ್ದೇಶದಿಂದ ಸರ್ಕಾರ ಯೋಜನೆ ಜಾರಿಗೆ ತಂದಿದೆ.

ಈ ಯೋಜನೆಗಾಗಿ ಸರ್ಕಾರವು ಈಗಾಗಲೇ ಇಒಐ (Expression of Interest) ಮೂಲಕ ಗುತ್ತಿಗೆದಾರರನ್ನು ಎರಡು ವರ್ಷಗಳ ಅವಧಿಗೆ ಎಂಪ್ಯಾನೆಲ್ ಮಾಡಿಕೊಂಡಿತ್ತು. ಇದೀಗ ಈ ಅವಧಿಯನ್ನು ಇನ್ನೂ ಎರಡು ವರ್ಷಗಳ ಕಾಲ ವಿಸ್ತರಿಸುವ ಪ್ರಸ್ತಾವನೆ ಸಭೆಯಲ್ಲಿ ಚರ್ಚೆಗೆ ಬಂದಿದೆ. ಇದೇ ಕಾರಣಕ್ಕೆ ಸಚಿವ ಎಚ್.ಸಿ. ಮಹದೇವಪ್ಪ ಅವರು ಸಚಿವ ಕೆ.ಜೆ. ಜಾರ್ಜ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ಅಡಿಯಲ್ಲಿ ಹಣ ಬಿಡುಗಡೆ ಮಾಡುವಲ್ಲಿ ಅಸಮರ್ಪಕತೆ ನಡೆಯುತ್ತಿದೆ. ಇಲಾಖೆಗಳ ನಡುವೆ ಸಂಯೋಜನೆ ಇಲ್ಲ. ಯೋಜನೆಗಳ ಕಾರ್ಯದಲ್ಲಿ ವಿಳಂಬ ಉಂಟಾಗಿದೆ" ಎಂದು ಮಹದೇವಪ್ಪ ಕಿಡಿಕಾರಿದರು. ಸಭೆಯ ವೇಳೆ ತೀವ್ರ ಧ್ವನಿಯಲ್ಲಿ ಮಾತನಾಡಿದ ಮಹದೇವಪ್ಪ, ನಾನು ಎದ್ದು ಹೊರಟೇ ಬಿಡುತ್ತೇನೆ, ಈ ರೀತಿಯ ಕಾರ್ಯಪದ್ಧತಿಯನ್ನು ಸಹಿಸೋದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರೆಂದು ಮೂಲಗಳು ತಿಳಿಸಿವೆ. ಅವರ ಹೇಳಿಕೆಯಿಂದ ಕೆಲಕಾಲ ಸಭೆಯಲ್ಲಿ ಅಸಮಾಧಾನದ ವಾತಾವರಣ ನಿರ್ಮಾಣವಾಯಿತು.

ಆದರೆ ನಂತರ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಸಿದ್ದರಾಮಯ್ಯ ಅವರು, ಯಾವುದೇ ಇಲಾಖೆಯು ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದ ಬಳಕೆಯಲ್ಲಿ ವಿಳಂಬ ಮಾಡಬಾರದು. ಈ ಯೋಜನೆಗಳು ಅತಿ ಸಂವೇದನಶೀಲ, ಫಲಾನುಭವಿಗಳ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಆದ್ಯತೆ ಎಂದು ಸೂಚನೆ ನೀಡಿದರು. ಸಭೆಯ ನಂತರ ಮಹದೇವಪ್ಪ ಮತ್ತು ಕೆ.ಜೆ. ಜಾರ್ಜ್ ಇಬ್ಬರೂ ಈ ವಿಷಯವನ್ನು ವೈಯಕ್ತಿಕವಾಗಿ ಚರ್ಚಿಸಿಕೊಂಡು ಸಮಸ್ಯೆ ಪರಿಹಾರಕ್ಕೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ಈ ವಾಗ್ವಾದ ರಾಜ್ಯ ರಾಜಕೀಯ ವಲಯದಲ್ಲೂ ಚರ್ಚೆಯ ವಿಷಯವಾಗಿದ್ದು, ಸಚಿವ ಸಂಪುಟದ ಒಳಗಿನ ಭಿನ್ನಾಭಿಪ್ರಾಯಗಳು ಮತ್ತೆ ಬಹಿರಂಗವಾಗಿವೆ ಎಂಬ ಟೀಕೆಗಳು ಕೇಳಿಬಂದಿವೆ.

Category
ಕರಾವಳಿ ತರಂಗಿಣಿ