image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜಾತಿ ಗಣತಿ ದಿನಾಂಕ ಮತ್ತೆ ವಿಸ್ತರಣೆ ಮಾಡಿದ ರಾಜ್ಯ ಸರ್ಕಾರ

ಜಾತಿ ಗಣತಿ ದಿನಾಂಕ ಮತ್ತೆ ವಿಸ್ತರಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಿತಿಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ರಾಜ್ಯದ ಉಳಿದ ಭಾಗಗಳೊಂದಿಗೆ ಸರಿಸಮನಾಗಿರಲು ವಿಫಲವಾದ ಕಾರಣ, ಸರ್ಕಾರವು ಭಾನುವಾರ ಜಿಬಿಎ ಮಿತಿಗಳಲ್ಲಿ ಅಕ್ಟೋಬರ್ 31 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ದೀಪಾವಳಿ ರಜೆಯ ನಂತರ ಅಕ್ಟೋಬರ್ 23 ರಿಂದ ಅಕ್ಟೋಬರ್ 31 ರವರೆಗೆ ಜಿಬಿಎ ಮಿತಿಗಳಲ್ಲಿ ಸಮೀಕ್ಷೆ ಮುಂದುವರಿಯುತ್ತದೆ. ದೀಪಾವಳಿ ಹಬ್ಬದ ನಿಮಿತ್ತ ಮೂರು ದಿನಗಳ ರಜೆ ನೀಡಲಾಗಿದೆ. ಅಕ್ಟೋಬರ್ 23ರಿಂದ ಸಮೀಕ್ಷೆ ಪುನರಾರಂಭವಾಗಲಿದೆ. ಬೆಂಗಳೂರಿನಲ್ಲಿ ಶೇ.45ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಶಾಸಕರು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ಸಚಿವ ಶಿವರಾಜ್ ಎಸ್ ತಂಗಡಗಿ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಮೀಕ್ಷೆಯನ್ನು ಅಕ್ಟೋಬರ್‌ 31 ವರೆಗೂ ವಿಸ್ತರಣೆ ಮಾಡಲಾಗಿದೆ. ಆದರೆ, ಶಿಕ್ಷಕರನ್ನು ಬಳಕೆ ಮಾಡಿಕೊಳ್ಳದಿರಲು ತೀರ್ಮಾನಿಸಲಾಗಿದೆ. ಹೀಗಾಗಿ, ಶಾಲೆಗಳು ಎಂದಿನಂತೆ ನಡೆಯಲಿವೆ. ಸಮೀಕ್ಷೆಗಾಗಿ ದಸರಾ ರಜೆ ವಿಸ್ತರಣೆ ಮಾಡಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿಗಳ ನಿರ್ದೇಶನದಂತೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 20, 21 ಹಾಗೂ 22 ರಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ರಜೆ ನೀಡಲಾಗಿದೆ. ಅಕ್ಟೋಬರ್‌ 23 ಮೂರರಿಂದ ಸಮೀಕ್ಷೆ ಪುನಃ ಪ್ರಾರಂಭವಾಗಲಿದೆ. ಆಯಾ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿನ ವಿವಿಧ ಇಲಾಖೆಯ ಸಿಬ್ಬಂದಿಗಳನ್ನ ಬಳಸಿ ಅಕ್ಟೋಬರ್ 23 ರಿಂದ 31 ರವರೆಗೆ ಸಮೀಕ್ಷೆ ಕಾರ್ಯವನ್ನ ಪೂರ್ಣಗೊಳಿಸಲಿದ್ದಾರೆ ಎಂದು ತಿಳಿಸಿದರು. ಗ್ರೇಟರ್ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಶೇಕಡ 95ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ರಾಮನಗರ ಶೇ.86%, ಧಾರವಾಡ ಶೇ.88% ಹಾಗೂ ಬೀದರ್ ಜಿಲ್ಲೆಗಳಲ್ಲಿ ಶೇ 79.46% ಸಮೀಕ್ಷೆ ಕಾರ್ಯ ತುಸು ಕುಂಠಿತವಾಗಿದೆ. ಬೆಂಗಳೂರಿನಲ್ಲಿ ಶೇಕಡ 45ರಷ್ಟು ಸಮೀಕ್ಷೆ ಕಾರ್ಯ ನಡೆದಿದೆ. ಬೆಂಗಳೂರಿನಲ್ಲಿ ತಡವಾಗಿ ಸಮೀಕ್ಷೆ ಪ್ರಾರಂಭವಾದ ಕಾರಣ ಸಮೀಕ್ಷೆ ಕಡಿಮೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ನೂರರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಜಿಲ್ಲೆಗಳಲ್ಲಿ ಮಾತ್ರ ಸಮೀಕ್ಷೆ ಅಕ್ಟೋಬರ್ 31ರವರೆಗೆ ನಡೆಯಲಿದ್ದು, ಕೆಲ ಜಿಲ್ಲೆಗಳಲ್ಲಿ ಈ ಕಾರ್ಯ ಶೀಘ್ರವೇ ಪೂರ್ಣಗೊಳ್ಳಬಹುದು ಎಂದರು. ಬೆಂಗಳೂರಿನ ಜನರಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುವಂತೆ ಶಾಸಕರಿಗೆ ನಿರ್ದೇಶನ ನೀಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ರವಾನೆಯಾಗಲಿದೆ ಎಂದು ಹೇಳಿದರು. ಇನ್ನೂ ಹಿಂದುಳಿದ ವರ್ಗಗಳ ಆಯೋಗದ ಮಾಹಿತಿಯ ಪ್ರಕಾರ, ಮಂಡ್ಯವು ರಾಜ್ಯದಲ್ಲಿ ಅತಿ ಹೆಚ್ಚು ಶೇಕಡಾವಾರು ಜನಗಣತಿಯನ್ನು (104.29%) ಕಂಡಿದೆ, ಅಲ್ಲಿ 17.96 ಲಕ್ಷ ಜನರನ್ನು ಎಣಿಕೆ ಮಾಡಲಾಗಿದೆ.

Category
ಕರಾವಳಿ ತರಂಗಿಣಿ