ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಇನ್ನೂ ಕೂಡ ಜಾತಿ ಗಣತಿ ಸಂಪೂರ್ಣವಾಗಿಲ್ಲ. ಈ ಮಧ್ಯೆ ಇದೀಗ ದೀಪಾವಳಿ ಹಬ್ಬ ಸನಿಹದಲ್ಲಿದ್ದು, ಹೀಗಾಗಿ ರಾಜ್ಯ ಸರ್ಕಾರ ಅಕ್ಟೋಬರ್.23ರವರೆಗೆ 3 ದಿನಗಳ ಕಾಲ ಜಾತಿಗಣತಿ ಸಮೀಕ್ಷೆಗೆ ತಾತ್ಕಾಲಿಕ ವಿರಾಮ ನೀಡಿದೆ. ಹೀಗೆ ಸಮೀಕ್ಷ ಅವಧಿ ವಿಸ್ತರಣೆ ವೇಳೆ ಶಿಕ್ಷಕರನ್ನು ನಿಯೋಜಿಲ್ಲ. ಸರ್ವೆಗೆ ಇತರೆ ಇಲಾಖೆಗಳ ಸಿಬ್ಬಂದಿಯನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ.ಸದ್ಯ ಬೆಂಗಳೂರಿನಲ್ಲಿ ಸರ್ವೆ ಕಾರ್ಯ ಪೂರ್ಣವಾಗಿಲ್ಲ. ಇನ್ನುಳಿದಂತೆ ರಾಮನಗರ, ಬೀದರ್ ನಲ್ಲಿ ಶೇ 90 ಗಿಂತ ಕಡಿಮೆ ಸರ್ವೆಯಾಗಿದ್ದು ಅ.31ರವರೆಗೆ ಸರ್ವೆ ವಿಸ್ತರಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಕುರಿತು ಪ್ರಗತಿ ಪರಿಶೀಲನೆ ನಡೆಸಿದ್ದು, ದೀಪಾವಳಿ ಹಬ್ಬದ ಹಿನ್ನಲೆ ಸಮೀಕ್ಷೆಗೆ ಅಕ್ಟೋಬರ್.23ರವರೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ದೀಪಾವಳಿಯ ಬಳಿಕ ಅಕ್ಟೋಬರ್ 23ರಿಂದ 31ರವರೆಗೆ ಮತ್ತೆ ಸಮೀಕ್ಷೆ ನಡೆಸಲು ಸಿಎಂ ಸೂಚಿಸಿದ್ದಾರೆ. ಈ ಸಂಬಂಧ ಗೃಹ ಕಚೇರಿ ಕೃಷ್ಣದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆದಿದ್ದು, ಸಚಿವರಾದ ಕೆ.ಜೆ.ಜಾರ್ಜ್, ಶಿವರಾಜ ತಂಗಡಗಿ, ರಾಮಲಿಂಗಾ ರೆಡ್ಡಿ, ಭೈರತಿ ಸುರೇಶ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್. ನಾಯಕ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.