image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಿತ್ತಾಪುರದಲ್ಲಿ RSS ಪಥಸಂಚಲನ: ಹೊಸ ಅರ್ಜಿ ಸಲ್ಲಿಕೆಗೆ ನ್ಯಾಯಾಲಯ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಹೊಸ ಅರ್ಜಿ ಸಲ್ಲಿಕೆಗೆ ನ್ಯಾಯಾಲಯ ಸೂಚನೆ

ಬೆಂಗಳೂರು: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರ ಮತ್ತು ಅರ್ಜಿದಾರರಿಗೆ ಮಹತ್ವದ ಸೂಚನೆಯನ್ನು ನೀಡಿದೆ. ನವೆಂಬರ್ 2ರಂದು ಪಥಸಂಚಲನಕ್ಕೆ ಆರ್‌ಎಸ್‌ಎಸ್ ಒಪ್ಪಿಕೊಂಡಿದ್ದು, ಅರ್ಜಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚನೆಯನ್ನು ನೀಡಿದೆ. ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿಕೆ ಮಾಡಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌, ಬೃಹತ್‌ ಪಥಸಂಚಲನ ನಡೆಸಲು ಮುಂದಾಗುವ ಮೂಲಕ, ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿತ್ತು. ನಗರದ ಮುಖ್ಯ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಕೇಸರಿ ಧ್ವಜ, ಭಗವಾ ಧ್ವಜ, ಬ್ಯಾನರ್‌, ಬಂಟಿಂಗ್‌ಗಳನ್ನೆಲ್ಲ ಅಲ್ಲಿನ ಪುರಸಭೆಯ ಸಿಬ್ಬಂದಿ ರಾತ್ರೋರಾತ್ರಿ ತೆರವುಗೊಳಿಸಲಾಗಿತ್ತು. ತೆರವು ಖಂಡಿಸಿ ಚಿತ್ತಾಪುರ ಪುರಸಭೆಯ ಮುಖ್ಯಾಧಿಕಾರಿ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಲಾಗಿತ್ತು.

ಪಥ ಸಂಚಲನದ ವೇಳೆ ಲಾಠಿ, ಆಯುಧಗಳ ಬಳಕೆ ಮಾಡುವ ಬಗ್ಗೆ ಉಲ್ಲೇಖವಿಲ್ಲ. ಕಾರ್ಯಕ್ರಮದಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ ಎಂಬ ಮಾಹಿತಿ ಇಲ್ಲ. ಸಂಘದ ನೋಂದಣಿ ಪ್ರಮಾಣಪತ್ರದ ಪ್ರತಿ ಸಲ್ಲಿಸಿಲ್ಲ. ಈ ಮೇಲಿನ ಕಾರಣಗಳು ಸೇರಿದಂತೆ ಒಟ್ಟು 11 ಅಂಶಗಳ ಬಗ್ಗೆ ತಹಸೀಲ್ದಾರ್‌ ವಿವರಣೆ ಕೋರಿದ್ದಾರೆ. ಪುರಸಭೆಗೆ 6 ಸಾವಿರ ರು. ಜಾಹೀರಾತು ಶುಲ್ಕ ಪಾವತಿಸಿದ್ದೇವೆ. ಆದ್ರೂ ರಾತ್ರೋರಾತ್ರಿ ಧ್ವಜ, ಬ್ಯಾನರ್ ತೆರವು ಮಾಡಿದ್ದಾರೆ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಪುರುಸಭೆ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು.

ಅಕ್ಟೋಬರ್ 13ರಂದು ಪೊಲೀಸರಿಗೆ ಭದ್ರತೆ ನೀಡಲು ಮಾಹಿತಿ ನೀಡಲಾಗಿತ್ತು. ಅ.17 ರಂದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ನಿನ್ನೆ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. 'ದಲಿತ ಸಂಘಟನೆಗಳಾದ ಭೀಮ್‌ ಆರ್ಮಿ, ದಲಿತ ಪ್ಯಾಂಥರ್‌ ಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ಕೊಡಬಾರದು. ಒಂದು ವೇಳೆ, ಅವರಿಗೆ ಅನುಮತಿ ನೀಡುವುದಾದರೆ, ನಾವೂ ಲಾಠಿ ಹಿಡಿದು ಪಥ ಸಂಚಲನ ಮಾಡುತ್ತೇವೆ, ನಮಗೂ ಅನುಮತಿ ಕೊಡಿ' ಎಂದು ಮನವಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ