image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಘೋಷಣೆ : ಶೇ.40ರಷ್ಟು ಟ್ರಾಫಿಕ್‌ ಕಡಿತ ಗುರಿ

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಘೋಷಣೆ : ಶೇ.40ರಷ್ಟು ಟ್ರಾಫಿಕ್‌ ಕಡಿತ ಗುರಿ

ಬೆಂಗಳೂರು: ಪೆರಿಫೆರಲ್‌ ರಿಂಗ್‌ ರಸ್ತೆಯನ್ನು "ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ (ಬಿಬಿಸಿ)' ಎಂದು ಮರುನಾಮಕರಣ ಮಾಡಿರುವ ರಾಜ್ಯ ಸರ್ಕಾರ, 117 ಕಿ.ಮೀ. ಉದ್ದದ ಕಾಮಗಾರಿಯನ್ನು 2 ವರ್ಷದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಸಮರ್ಪಿಸುವ ಗುರಿಹೊಂದಿದೆ. ಅಷ್ಟೇ ಅಲ್ಲದೆ, ಈ ಯೋಜನೆಗಾಗಿ ಭೂಮಿ ನೀಡುವ ಮಾಲಿಕ‌ರಿಗೆ 4 ಮಾದರಿಯ ಪರಿಹಾರ ನೀಡಲು ಪ್ರಸ್ತಾಪಿಸಿದ್ದು, ಇದು ನಮ್ಮ ಸರ್ಕಾರದ ದೊಡ್ಡ ತೀರ್ಮಾನ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರಕಟಿಸಿದರು. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಗಳೂರಿನಲ್ಲಿ ಇಷ್ಟು ಪ್ರಮಾಣದ ಹೊಸ ರಸ್ತೆಯನ್ನು ಸೇರಿಸುವ ಮೂಲಕ ರಾಜ್ಯ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯುತ್ತಿದೆ. ತುಮಕೂರು ರಸ್ತೆಯಿಂದ ಯಲಹಂಕ, ಎಲೆಕ್ಟ್ರಾನಿಕ್‌ ಸಿಟಿ ಮೂಲಕ ಮೈಸೂರು ರಸ್ತೆವರೆಗೂ ಸಾಗಲಿದೆ. ಈ ರಸ್ತೆಯು ಬೆಂಗಳೂರಿನ ಉತ್ತರ ಭಾಗದಲ್ಲಿ 73 ಕಿ.ಮೀ. ಸಾಗಲಿದ್ದು, ಉಳಿದದ್ದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಾಗಲಿದೆ'' ಎಂದು ತಿಳಿಸಿದರು. ಈ ಹಿಂದಿನ ಸರ್ಕಾರ ಈ ಯೋಜನೆಗೆ ಅಧಿಸೂಚನೆ ಹೊರಡಿಸಲಾಗಿತ್ತಾದರೂ ಇದನ್ನು ಹಿಂಪಡೆದಿರಲಿಲ್ಲ. ಈಗ ಬೆಂಗಳೂರಿನಲ್ಲಿ ನೈಸ್‌ ರಸ್ತೆಗೆ ಪರ್ಯಾಯ ರಸ್ತೆ ಅಗತ್ಯವಿದೆ. ಯಾವುದೇ ಕಾರಣಕ್ಕೂ ಡಿನೋಟಿಫಿಕೇಶನ್‌ ಮಾಡಬಾರದು ಎಂದು ಈ ಯೋಜನೆ ಕೈಗೆತ್ತಿಕೊಂಡಿದೆ. ಮೂಲ ಯೋಜನೆ ಪ್ರಕಾರ 100 ಮೀಟರ್‌ಅಗಲದ ರಸ್ತೆ ಮಾಡಬೇಕಿತ್ತು. ಆದರೆ, 65 ಮೀಟರ್‌ ಮಾತ್ರ ರಸ್ತೆ ಮಾಡಿ, ಉಳಿಯುವ 35 ಮೀಟರ್‌ನ್ನು ಪರಿಹಾರದ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಗೆ ಸರ್ಕಾರದ ಖಾತರಿಯೊಂದಿಗೆ ಹುಡ್ಕೊà ಮೂಲಕ 27 ಸಾವಿರ ಕೋಟಿ ರೂ. ಸಾಲ ಪಡೆಯಲಾಗಿದೆ.

ಈ ಯೋಜನೆಗಾಗಿ 100 ಮೀ. ಅಗಲ ಜಾಗಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಸರ್ಕಾರ ಬೆಂಗಳೂರು ಮೈಸೂರು ಹೆದ್ದಾರಿ ಗಾತ್ರ (65 ಮೀ.) ದಲ್ಲೇ ಈ ರಸ್ತೆ ಮಾಡಲು ತೀರ್ಮಾನಿಸಿದೆ. ರಸ್ತೆಯ ಎರಡೂ ಭಾಗದಲ್ಲಿ ಸರ್ವೀಸ್‌ ರಸ್ತೆ ಇರಲಿದ್ದು, ಪ್ರಮುಖ ರಸ್ತೆ ಟೋಲ್‌ ರಸ್ತೆಯಾಗಲಿದೆ. ಈ ರಸ್ತೆಯ ಮಧ್ಯೆ ಮೆಟ್ರೋ ಯೋಜನೆ ರೂಪಿಸಲು ಜಾಗ (5 ಮೀ.) ಕಲ್ಪಿಸಲಾಗುವುದು. ಉಳಿದ 35 ಮೀ. ಜಾಗವನ್ನು ರೈತರಿಗೆ ಪರಿಹಾರ ರೂಪದಲ್ಲಿ ಮರಳಿ ನೀಡಲು ತೀರ್ಮಾನಿಸಿದ್ದೇವೆ. ಈ ಜಾಗವನ್ನು ಹರಾಜು ಹಾಕಬೇಕು ಎಂಬ ಸಲಹೆಗಳು ಬಂದಿತ್ತಾದರೂ ರೈತರಿಗೆ ನೀಡಲು ನಿರ್ಧರಿಸಿದ್ದೇವೆ. ಇದು ವಾಣಿಜ್ಯ ಉದ್ದೇಶಕ್ಕೆ ನೆರವಾಗಲಿರುವ ಹಿನ್ನೆಲೆಯಲ್ಲಿ ರೈತರ ಮನವಿ ಮೇರೆಗೆ ಜಾಗವನ್ನು ಅವರಿಗೆ ನೀಡುವ ತೀರ್ಮಾನ ಮಾಡಲಾಗಿದೆ. 20 ಗುಂಟೆಗಿಂತ ಕಡಿಮೆ ಭೂಮಿ ಕೊಟ್ಟವರಿಗೆ ನಗದು ರೂಪದಲ್ಲೇ ಪರಿಹಾರ ನೀಡಲಾಗುತ್ತದೆ ಎಂದು ವಿವರಿಸಿದರು. ಮುಂದಿನ 2 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು. ಸರ್ಕಾರದ ಈ ತೀರ್ಮಾನಕ್ಕಾಗಿ ರೈತರು ಕಾತುರರಾಗಿದ್ದರು. ಒಂದು ವೇಳೆ ಯಾರಾದರೂ ಭೂಮಿ ನೀಡಲು ನಿರಾಕರಿಸಿದರೆ, ನಾವು ಸಹಜ ಸ್ವಾಧೀನ ಪ್ರಕ್ರಿಯೆ ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟು ಯೋಜನೆ ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ಡಿನೋಟಿಫಿಕೇಶನ್‌ ಮಾಡುವುದಿಲ್ಲ. ಸಂಚಾರ ದಟ್ಟಣೆಯಿಂದ ಬೆಂಗಳೂರಿನಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದ್ದು, ಈ ಯೋಜನೆ ಅಗತ್ಯವಾಗಿದೆ. ಈ ಯೋಜನೆಯಿಂದ 1900 ಕುಟುಂಬಗಳಿಗೆ ಪರಿಣಾಮ ಬೀರುತ್ತದೆಯಾದರೂ ಬೆಂಗಳೂರು ನಗರಕ್ಕೆ ದೊಡ್ಡ ಮಟ್ಟದ ನಿರಾಳತೆ ನೀಡಲಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಮಹತ್ತರ ತೀರ್ಮಾನ ಕೈಗೊಂಡಿದೆ. ಟಿಡಿಆರ್‌ ವಿನಿಮಯ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಪ್ರಕ್ರಿಯೆ ಸುಗಮವಾಗಿ ಆಸ್ತಿಗಳ ವಿನಿಮಯ ಮಾಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ಭೂಮಿ ಕಳೆದುಕೊಳ್ಳುವವರು ನೋಂದಣಿ ಮಾಡಿಕೊಂಡು, ಈ ಟಿಡಿಆರ್‌ ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ಡಿಕೆಶಿ ತಿಳಿಸಿದರು.

Category
ಕರಾವಳಿ ತರಂಗಿಣಿ