ಬೆಂಗಳೂರು: ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆ ಹೆಚ್ಚಿಸಲು 9ನೇ ವರದಿಯಲ್ಲಿ ಒಟ್ಟು 449 ಶಿಫಾರಸುಗಳನ್ನು ಮಾಡಿರುವ ಎರಡನೇ ಆಡಳಿತ ಸುಧಾರಣಾ ಆಯೋಗವು, ನಿಗಮ-ಮಂಡಳಿಗಳ ಪೈಕಿ ಒಂಬತ್ತು ವಿಲೀನ ಹಾಗೂ ಏಳನ್ನು ಸಂಪೂರ್ಣವಾಗಿ ಮುಚ್ಚಲು ಸಲಹೆ ನೀಡಿದೆ. ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಗುರುವಾರ 9ನೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಈ ವೇಳೆ ಆಯೋಗದ ಸಲಹೆಗಾರ ಎನ್.ಎಸ್.ಪ್ರಸನ್ನಕುಮಾರ್, ವಿಶೇಷ ಕಾರ್ಯದರ್ಶಿ ರಮೇಶ್ ದೇಸಾಯಿ ಇದ್ದರು.
ಸರ್ಕಾರಿ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮಯೋಚಿತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ನಷ್ಟದಲ್ಲಿರುವ ಹಾಗೂ ಜನರಿಗೆ ಉಪಯೋಗವಾಗದ ನಿಗಮ, ಮಂಡಳಿಗಳನ್ನು ಮುಚ್ಚಲು, ವಿಲೀನಗೊಳಿಸಲು ಹಾಗೂ ಭೂಸ್ವಾಧೀನ ಕಾಯ್ದೆಯಲ್ಲೂ ಏಕರೂಪ ತರುವಂತೆ ಶಿಫಾರಸು ಮಾಡಿದೆ. ಆರ್.ವಿ.ದೇಶಪಾಂಡೆ ಮಾತನಾಡಿ, 'ಸಾರ್ವಜನಿಕ ವಲಯದ ಸಂಸ್ಥೆಗಳ ಪುನರ್ ರಚನೆಗಾಗಿ 379 ಶಿಫಾರಸುಗಳನ್ನು ಮಾಡಲಾಗಿದೆ. 80 ನಿಗಮ-ಮಂಡಳಿಗಳ ಐದು ವರ್ಷದ ಆರ್ಥಿಕ ಸ್ಥಿತಿ, ಸಿಬ್ಬಂದಿ, ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಲಾಯಿತು. ಅಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ವರದಿ ನೀಡಲಾಗಿದೆ. 60 ನಿಗಮ-ಮಂಡಳಿಗಳನ್ನು ಬಲಪಡಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ನಷ್ಟದಲ್ಲಿರುವ ಮತ್ತು ನಿಷ್ಕ್ರಿಯವಾಗಿರುವ ನಿಗಮ-ಮಂಡಳಿ ಬೀಗ ಹಾಕಲು ಮತ್ತು ವಿಲೀನಗೊಳಿಸಲು ಆರು ತಿಂಗಳೊಳಗೆ ಏಕೀಕೃತ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು' ಎಂದು ಹೇಳಿದರು.
ಭೂಸ್ವಾಧೀನ ಕಾಯ್ದೆಯಲ್ಲೂ ಏಕರೂಪ ತರಲು 15 ಶಿಫಾರಸುಗಳನ್ನು ಮಾಡಲಾಗಿದೆ. ಕೆಐಎಡಿಬಿ ಕಾಯ್ದೆ 1976, ಕೆಎಚ್‌ಬಿ ಕಾಯ್ದೆ-1962, ಕೊಳೆಗೇರಿ ಪ್ರದೇಶಗಳ ಕಾಯ್ದೆ-1973, ನೀರಾವರಿ ಕಾಯ್ದೆ-1965, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಹಕ್ಕು-2013. ಈ ಕಾಯ್ದೆಗಳನ್ನು ಒಳಗೊಂಡು ಏಕರೂಪತೆ, ಪಾರದರ್ಶಕತೆ ತರುವಂತೆ ಆಯೋಗ ಸಲಹೆ ನೀಡಿದೆ. ಭೂಸ್ವಾಧೀನ, ಪರಿಹಾರ, ಪುನರ್ವಸತಿ ಮತ್ತು ಪುನರ್‌ವ್ಯವಸ್ಥೆ ಕಾಯ್ದೆ 2013ರ ಅನುಗುಣವಾಗಿ ತಿದ್ದುಪಡಿ ಮಾಡಬೇಕು ಅಥವಾ ಅಳವಡಿಸಿಕೊಳ್ಳಬೇಕು. ಭೂಸ್ವಾಧೀನ ಕಾನೂನುಗಳನ್ನು ಸಮನ್ವಯಗೊಳಿಸಲು ಉನ್ನತ ಮಟ್ಟದ ಸಮಿತಿ ರಚಿಸಬೇಕು. ಇದರಿಂದ ಭೂಮಾಲೀಕರ ಹಕ್ಕುಗಳನ್ನು ರಕ್ಷಿಸುವ ಜತೆಗೆ ಕೋರ್ಟ್‌ನಲ್ಲಿ ದಾಖಲಿಸುವ ಕೇಸ್‌ಗಳು ಕಡಿಮೆ ಆಗಲಿವೆ. ಒಂದು ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಭೂಸ್ವಾಧೀನಾಧಿಕಾರಿಗಳನ್ನು ಸದರಿ ಹುದ್ದೆಯಿಂದ ವರ್ಗಾಯಿಸಬಾರದು. ಯೋಜನೆಯ ಗಾತ್ರ ಮತ್ತು ಅವಧಿಗೆ ಅನುಗುಣವಾಗಿ ಅವಶ್ಯವಿರುವ ಸಹಾಯಕ ಸಿಬ್ಬಂದಿ ಮಂಜೂರು ಮಾಡಬೇಕು ಎಂದೂ ಹೇಳಿದೆ.