ಮಂಡ್ಯ : ಮಂಡ್ಯ ಜಿಲ್ಲೆ ಹೊಸಬೂದನೂರು ಗ್ರಾಮದಲ್ಲಿ 60 ವರ್ಷದಿಂದ ಇದ್ದ ಸರ್ಕಾರಿ ಸ್ಮಶಾನವಾಗಿದ್ದ ಜಾಗ 2017 ರಲ್ಲಿ ಮುಸ್ಲಿಮರಿಗೆ ಬಿಟ್ಟುಕೊಡಲಾಗಿದೆ. ಮುಸ್ಲಿಮರೇ ಇಲ್ಲದ ಊರಿನಲ್ಲಿ ಅವರಿಗಾಗಿ ಜಾಗ ಬಿಟ್ಟುಕೊಟ್ಟ ಬಗ್ಗೆ ಈಗ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಈ ನಿರ್ಧಾವನ್ನು ವಿರೋಧಿಸಿ ಮಂಡ್ಯದ ಜನರು ಪ್ರತಿಭಟನೆಗಿಳಿದಿದ್ದಾರೆ. ಮಂಡ್ಯ ಜಿಲ್ಲೆಯ ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ನೂರಾರು ಹಿಂದೂ ಧರ್ಮದ ಕುಟುಂಬಗಳಿವೆ. ಇಲ್ಲಿನ ಗ್ರಾಮಸ್ಥರು ಕಳೆದ 60 ವರ್ಷಗಳಿಂದ ಈ ಗ್ರಾಮದಲ್ಲಿನ ಒಂದು ಭೂಪ್ರದೇಶವನ್ನು ಸ್ಮಶಾನವಾಗಿ ಬಳಸುತ್ತಿದ್ದರು. ಇದೀಗ ಹಿಂದೂ ಧರ್ಮದಲ್ಲಿ ಒಂದು ಸಾವಾದರೂ ನೆಮ್ಮದಿಯಿಂದ ಅಂತ್ಯಸಂಸ್ಕಾರ ಮಾಡುವ ಅವಕಾಶವನ್ನೂ ಕಸಿದುಕೊಳ್ಳಲಾಗಿದೆ. 1963 ರಿಂದ 2017 ರವರೆಗೂ ಗ್ರಾಮದ ಸರ್ವೆ ನಂ. 313 ರ 1 ಎಕರೆ 13 ಗುಂಟೆ ಜಾಗ ಸರ್ಕಾರಿ ಸ್ಮಶಾನವಾಗಿತ್ತು. ಹಿಂದಿನಿಂದಲೂ ಇಲ್ಲಿನ ಹಿಂದೂಗಳು ಸಾವನಪ್ಪಿದಾಗ ಇದೇ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದರು. ಆದರೆ ವಕ್ಫ್ ಬೋರ್ಡ್ 2017 ರಲ್ಲಿ ಈ ಹಿಂದೂ ಜಾಗವನ್ನು ಏಕಾಏಕಿ ಮುಸ್ಲಿಂ ಮಕಾನ್ ಆಗಿ ಪರಿವರ್ತನೆ ಮಾಡಿದ್ದರು. ಮುಸ್ಲಿಂ ಜನರೇ ಇಲ್ಲದ ಊರಲ್ಲಿ ಹಿಂದೂ ಸ್ಮಶಾನವನ್ನು ಮುಸ್ಲಿಂ ಮಕಾನ್ ಮಾಡಿದ್ದಕ್ಕೆ ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ. 2021 ರಲ್ಲಿ ಅಂತ್ಯ ಸಂಸ್ಕಾರ ನಡೆಸದಂತೆ ವಕ್ಫ್ ಮಂಡಳಿ ಕ್ಯಾತೆ ತೆಗೆದಿತ್ತು. ಬಳಿಕ ಗ್ರಾಮಸ್ಥರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ ಸ್ಮಶಾನ ಜಾಗವನ್ನು ಗ್ರಾಮಸ್ಥರಿಗೆ ನೀಡಿತ್ತು. ಕೇವಲ 24 ಗುಂಟೆ ಜಾಗದಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡಿತ್ತು. ಆ ಸ್ಥಳದಲ್ಲಿ ಇದೀಗ ಅಂತ್ಯ ಸಂಸ್ಕಾರಕ್ಕೂ ತಡೆಯೊಡ್ಡಲಾಗಿದೆ. ಗ್ರಾಮ ಪಂಚಾಯತಿಯಿಂದ ಸ್ಮಶಾನ ಅಭಿವೃದ್ದಿ ಆಗಬೇಕಿದ್ದಾಗಲೂ ತಹಶೀಲ್ದಾರರು ಕೆಲಸ ತಡೆಹಿಡಿದಿದ್ದರು. ಇದರಿಂದ ಜಿಲ್ಲಾಡಳಿತ ವಿರುದ್ದ ಸಿಡಿದೆದ್ದ ಗ್ರಾಮಸ್ಥರು, ಮುಸ್ಲಿಂ ಮಕಾನನ್ನು ವಾಪಸ್ಸು ಹಿಂದೂ ಸ್ಮಶಾನವಾಗಿ ಮಾಡುವಂತೆ ಆಗ್ರಹಿಸಿದ್ದಾರೆ. ಸ್ಮಶಾನ ಅಭಿವೃದ್ದಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆಗೆ ಸಹ ಇಳಿದಿದ್ದಾರೆ.