ಕೋಲಾರ : ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, 4 ವಾರದೊಳಗೆ ಮಾಲೂರು ಕ್ಷೇತ್ರದ ಮರು ಮತಎಣಿಕೆ ಆಗಬೇಕು ಎಂದು ತಿಳಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆ.ವೈ.ನಂಜೇಗೌಡ ಅವರು ಆಯ್ಕೆ ಆಗಿರುವುದನ್ನು ಅನೂರ್ಜಿತಗೊಳಿಸುವಂತೆ ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ಗೌಡ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ, ಕೆ.ವೈ.ನಂಜೇಗೌಡರ ಮನವಿ ಮೇರೆಗೆ ಶಾಸಕ ಸ್ಥಾನ 'ಅಸಿಂಧು' ಎಂದು ಆದೇಶ ನೀಡಿತ್ತು. ಅಲ್ಲದೇ 30 ದಿನಗಳ ಕಾಲ ಹೈಕೋರ್ಟ್ ತಡೆ ನೀಡಿತ್ತು. ಈ ಅವಧಿಯಲ್ಲಿ ಶಾಸಕರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಪೀಠವು ಸೂಚಿಸಿತ್ತು. ಅದರಂತೆ ಮಾಲೂರು ವಿಧಾನ ಸಭಾ ಕ್ಷೇತ್ರದ ಮರು ಮತಎಣಿಕೆಗೆ ಕೋರಿ ಮಂಜುನಾಥ್ ಗೌಡ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಿಚಾರಣೆ ನಡೆಸಿದ ಪೀಠವು, 4 ವಾರದಲ್ಲಿ ಮರು ಮತ ಎಣಿಕೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಮರು ಮತಎಣಿಕೆ ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಪೀಠವು ಆದೇಶಿಸಿದೆ. ಜೊತೆಗೆ ಹೈ ಕೋರ್ಟ್ ನೀಡಿದ್ದ ಅಸಿಂಧು ಆದೇಶಕ್ಕೆ ತಡೆಯಾಜ್ಞೆಯನ್ನು ಕೂಡ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಕಳೆದ ವರ್ಷ ವಿಧಾನ ಸಭಾ ಚುನಾವಣೆಯಲ್ಲಿ 248 ಮತಗಳಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆವೈ ನಂಜೇಗೌಡ ಗೆದ್ದು ಬೀಗಿದ್ದರು. ಈ ಬಗ್ಗೆ ಮಂಜುನಾಥಗೌಡ ಇದರಲ್ಲಿ ಏನೋ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿದ್ದರು. ಇನ್ನೂ ಮತಗಳನ್ನು ಮರು ಎಣಿಕೆ ಮಾಡಲು ಆದೇಶಿಸಬೇಕು ಎಂದು ತಾವು ಕೋರಿದ ಅರ್ಜಿ ಕುರಿತು ಚುನಾವಣಾಧಿಕಾರಿ ಯಾವುದೇ ಆದೇಶ ಮಾಡಿಲ್ಲ. ಮತ ಎಣಿಕೆಯ ವಿಡಿಯೋಗಳು ಕಾಣೆಯಾಗಿದೆ. ಇದರಿಂದ ಚುನಾವಣೆ ಫಲಿತಾಂಶ ರದ್ದುಪಡಿಸಬೇಕು ಎಂದು ಅರ್ಜಿದಾರ ಮಂಜುನಾಥ್ ಕೋರಿದ್ದರು.