ಬೆಂಗಳೂರು: ಬಯೋಕಾನ್ ಮುಖ್ಯಸ್ಥೆ, ಮಹಿಳಾ ಉದ್ಯಮಿ ಕಿರಣ್ ಮಜುಂದಾರ್ ಷಾ ಅವರು ಬೆಂಗಳೂರಿನ ರಸ್ತೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬಹಿರಂಗವಾಗಿ ಪೋಸ್ಟ್ ಹಾಕುವ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಿರಣ್ ಮಜುಂದಾರ್ ಷಾ ಅವರು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಹಾಗೂ ಪ್ರಿಯಾಂಕಾ ಖರ್ಗೆ ಅವರಿಗೆ ತಮ್ಮ ಟ್ವಿಟ್ಟನ್ನು ಟ್ಯಾಗ್ ಮಾಡಿ ರಸ್ತೆಗಳನ್ನು ಏಕೆ ಸರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಿರಣ್ ಮಜುಂದಾರ್ ಅವರ ಪೋಸ್ಟ್ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕೂಟ ಅವರ ಪೋಸ್ಟ್‌ಗೆ ಭಾರಿ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಯೋಕಾನ್ ಪಾರ್ಕ್‌ಗೆ ಭೇಟಿ ನೀಡಿದ ವಿದೇಶಿ ಉದ್ಯಮಿಯೊಬ್ಬರು ನನ್ನನ್ನು ಪ್ರಶ್ನಿಸಿದರು. ಬೆಂಗಳೂರಿನ ರಸ್ತೆಗಳು ಏಕೆ ಇಷ್ಟೊಂದು ಕೆಟ್ಟದಾಗಿವೆ ಮತ್ತು ಸುತ್ತಲೂ ಇಷ್ಟೊಂದು ಕಸ ಏಕೆ ಇದೆ? ಸರ್ಕಾರ ಹೂಡಿಕೆಯನ್ನು ಬೆಂಬಲಿಸಲು ಬಯಸುವುದಿಲ್ಲವೇ? ಎಂದು ಪ್ರಶ್ನಿಸಿದರು. ನಾನು ಈಗಷ್ಟೇ ಚೀನಾದಿಂದ ಬಂದಿದ್ದೇನೆ ಆದರೆ ನನಗೊಂದು ವಿಚಾರ ಅರ್ಥವಾಗುತ್ತಿಲ್ಲ ಏಕೆ ಎಲ್ಲವೂ ಅನುಕೂಲಕರವಾಗಿದ್ದಾಗಲೂ ಏಕೆ ಭಾರತದಲ್ಲಿ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನ ರಸ್ತೆಗಳ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಅವರು ಬಹಿರಂಗವಾಗಿ ಟ್ವಿಟ್ ಮಾಡಿದ್ದಕ್ಕೆ ಸಚಿವ ಎಂಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಿರಣ್ ಮಜುಂದಾರ್ ಬೆಂಗಳೂರಿಗೆ ಸಾಕಷ್ಟು ಬಯೋ ಟೆಕ್ನಾಲಜಿ ಕಾಣಿಕೆ ಕೊಟ್ಟಿದ್ದಾರೆ. ಬೆಂಗಳೂರು ಕೂಡ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಮಳೆ ಹಾನಿಗೆ ಇಡೀ ರಾಜ್ಯದಲ್ಲಿ ನ್ಯಾಷನಲ್ ಹೈವೇ, ಸ್ಟೇಟ್ ಹೈವೇ, ಅಂಗನವಾಡಿಗಳಿಗೆ ಅನಾಹುತ ಆಗಿವೆ. ನಾನು ಕೂಡ ಸಿಎಂ ಗೆ ಮನವಿ ಮಾಡಿದ್ದೇನೆ. ಮೂಲಭೂತ ಸೌಕರ್ಯಗಳ ಹಾನಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. 1000 ಕೋಟಿ ರೂಪಾಯಿಯಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಸ್ವಲ್ಪ ಸಮಯ ಬೇಕು. ಬೆಂಗಳೂರಿಗೆ ಬೇರೆ ಕಡೆಗಳಿಂದ ಸಾಕಷ್ಟು ಮಂದಿ ಬಂದು ನೆಲೆಸಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡ್ತಿದ್ದೇವೆ. ಈಗ ಮಜುಂದಾರ್ ಈ ಮಾತು ಆಡುವ ಅವಶ್ಯಕತೆ ಇರಲಿಲ್ಲ. ಅವ್ರು ಸಿಎಸ್‌ಆರ್ ಫಂಡ್ ನಲ್ಲಿ ಕೆಲಸ ಮಾಡಲಿ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ. ಅವರು ಪದೇ ಪದೇ ಮಾತಾಡ್ತಿರುವ ಉದ್ದೇಶ ಆದರೂ ಏನು..? ಮೋಹನ್ ದಾಸ್ ಪೈಗೂ ಕರ್ನಾಟಕ ರಾಜ್ಯ ಎಲ್ಲವನ್ನೂ ಕೊಟ್ಟಿದೆ. ಬೇರೆ ರಾಜ್ಯಗಳ ಮಂತ್ರಿಗಳು ಈ ಕಡೆ ಬನ್ನಿ ಅಂದರೆ ಯಾರು ಹೋಗ್ತಾರೆ..? ಇನ್ನೂ ಬೇರೆ ಕಡೆಗಳಿಂದಲೇ ಈ ಕಡೆ ಉದ್ಯಮಿಗಳು ಬರುತ್ತಾರೆ. ರಾಜ್ಯದಿಂದ ಯಾರೂ ಕೂಡ ಹೊರಗೆ ಹೋಗುವುದಿಲ್ಲ. ಬಿಜೆಪಿಯವರು ಇದ್ದಾಗ ಏನು ಬದನೆಕಾಯಿ ಮಾಡಿದ್ದಾರಾ..? ಮಳೆಗಾಲದಲ್ಲಿ ಟಾರ್ ಹಾಕಬಾರದು ಇವಾಗ ಅನಿವಾರ್ಯವಾಗಿ ಗುಂಡಿ ಮುಚ್ಚಲೇಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತೊಂದೆಡೆ ನಿನ್ನೆ ಕಿರಣ್ ಮಜುಂದಾರ್ ಮಾಡಿದ ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, 4 ಲಕ್ಷಕ್ಕೂ ಹೆಚ್ಚು ಜನ ಈ ಪೋಸ್ಟ್ ವೀಕ್ಷಿಸಿದ್ದು, ಹಲವು ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ದಿನೇಶ್ ಜೋಶಿ ಎಂಬುವವರು ಪ್ರತಿಕ್ರಿಯಿಸಿದ್ದು, ಮೇಡಂ ಇಂದೋರ್ ಸ್ವಚ್ಛ ನಗರ ಮತ್ತು ಗುಣಮಟ್ಟದ ಮೂಲಸೌಕರ್ಯಕ್ಕೆ ಒಂದು ಗಮನಾರ್ಹ ಉದಾಹರಣೆ. ರಾಜಕೀಯವನ್ನು ಬದಿಗಿಟ್ಟು ನಾವು ಅದನ್ನು ಮಾದರಿಯಾಗಿ ಬಳಸಬಹುದು. ದಿನಕ್ಕೆ ಸರಿಸುಮಾರು 550 ಟನ್‌ಗಳಷ್ಟು ಪುರಸಭೆಯ ಘನತ್ಯಾಜ್ಯವನ್ನು ಸುಮಾರು 20 ಟನ್‌ಗಳಷ್ಟು ಸಿಬಿಜಿಯಾಗಿ ಪರಿವರ್ತಿಸಲಾಗುತ್ತದೆ. ಇದನ್ನು ಭಾರತೀಯ ಕಂಪನಿಯೊಂದು ಮಾಡಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ನಿಮ್ಮಂತಹ ಪ್ರತಿಯೊಬ್ಬ ಉದ್ಯಮಿಗಳು ಒಂದು ನಗರವನ್ನು ದತ್ತು ತೆಗೆದುಕೊಂಡು ಅದನ್ನು ಅಂತರರಾಷ್ಟ್ರೀಯ ಗುಣಮಟ್ಟದ್ದಾಗಿಸಲು ನಾವು ಅವಕಾಶ ನೀಡಬಹುದೇ? ಅದಕ್ಕಾಗಿ ಸಿಎಸ್‌ಆರ್ ವೆಚ್ಚವನ್ನು ಬಳಸಬಹುದು ಎಂದು ತೇಜಸ್ ಲಕ್ಷ್ಮಿ ಎಂಬುವವರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಬಾಲಾಜಿ ಎಂಬುವವರು ಕಿರಣ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ನಿಮ್ಮ ಪ್ರಶ್ನೆಗೆ ಸಣ್ಣ ಉತ್ತರ: ಸಾರ್ವಜನಿಕ ಸೇವಕರು ಸಂಪೂರ್ಣವಾಗಿ ಭ್ರಷ್ಟರು ಮತ್ತು ಅಸಮರ್ಥರು. ದೀರ್ಘ ಉತ್ತರ: ಮತ್ತು ಸಿಸಿಪಿಯಂತಲ್ಲದೆ, ಭಾರತದ ಪ್ರಜಾಪ್ರಭುತ್ವವು ಸಾರ್ವಜನಿಕ ಸೇವಕರನ್ನು ಹೊಣೆಗಾರರನ್ನಾಗಿ ಮಾಡುವುದನ್ನು ತಡೆಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.