ಕಲಬುರ್ಗಿ : ಆರ್ ಎಸ್‌ಎಸ್ ಶಾಖೆಗಳ ಮೇಲೆ ನಿರ್ಬಂಧ ವಿಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಈ ಬೆನ್ನಲ್ಲೇ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಅದರಲ್ಲೂ ಕಾಂಗ್ರೆಸ್ ಶಾಸಕರ ಶಾಲೆಯಲ್ಲೇ ಆರ್ ಎಸ್‌ಎಸ್ ಶಾಖೆ ನಡೆಸಿರುವ ಸುದ್ದಿ ಎಲ್ಲೆಡೆ ವೈರಲ್ ಆಗತೊಡಗಿದೆ. ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕದಲ್ಲಿ ಆರ್ಎಸ್ಎಸ್ ನ್ನು (RSS) ನಿಷೇಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಶಾಸಕ ಎಂವೈ ಪಾಟೀಲ್ ಒಡೆತನದ ಮಹಾಂತೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅನುದಾನಿತ ಶಾಲೆಯಲ್ಲಿ ಆರ್ಎಸ್ಎಸ್ ಬೈಠಕ್ ನಡೆದಿದೆ. ಅಷ್ಟೇ ಅಲ್ಲದೆ, ಶಾಲೆಯ ಆವರಣದಲ್ಲಿ ಆರ್ಎಸ್ಎಸ್ ಪಥಸಂಚಲನ, ಬೌದ್ಧಿಕ ಕಾರ್ಯಕ್ರಮ ಕೂಡ ನಡೆದಿದೆ.
ಆರ್ಎಸ್ಎಸ್ ಚಟುವಟಿಕೆ ನಿಷೇಧ ಕುರಿತು ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಆರ್ ಎಸ್‌ಎಸ್ ನಲ್ಲೂ ಸ್ವಾತಂತ್ರ್ಯಕ್ಕೆ ಬಲಿಯಾದವರು ಒಬ್ಬರೋ ಇಬ್ಬರೋ ಇರಬಹುದು. ಆರ್ಎಸ್ಎಸ್ ಲಾಠಿ ಬಿಟ್ಟು ತಿರಂಗಾ ಬಾವುಟ ಹಿಡಿಯಲಿ. ಅವರು ತಿರಂಗಾ ಹಿಡಿದರೆ ಸ್ವಾಗತಬಿದೆ. ಲಾಠಿ ಹಿಡಿದು ಪಥಸಂಚಲನ ಮಾಡಿದರೆ ಖಂಡಿಸುತ್ತೇವೆ ಎಂದಿದ್ದಾರೆ. ಆರ್ಎಸ್ಎಸ್ ಯಾಕೆ ಕೇಂದ್ರ ಕಚೇರಿ ಮೇಲೆ ತಿರಂಗಾ ಬಾವುಟ ಹಾರಿಸಲ್ಲ? ಅದು ದೇಶ ಕಟ್ಟುವ ಸಂಘಟನೆ ಅಲ್ಲ, ಬದಲಾಗಿ ದೇಶ ಒಡೆಯುವ ಸಂಘಟನೆ ಎಂದು ಎಂವೈ ಪಾಟೀಲ್ ಹೇಳಿದ್ದಾರೆ.
ಮಹಾಂತೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅನುದಾನಿತ ಶಾಲೆ ಆವರಣದಲ್ಲಿ ಆರ್ಎಸ್ಎಸ್ ಪಥಸಂಚಲನ ನಡೆಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಶಾಸಕರು, ನಮ್ಮ ಶಾಲೆ ಸಾರ್ವಜನಿಕರ ಸ್ವತ್ತು. ಎಲ್ಲಾ ಪಕ್ಷದವರಿಗೆ ಕಾರ್ಯಕ್ರಮ ಮಾಡಿಕೊಡಲು ಜಾಗ ಕೊಟ್ಟಿದ್ದೇವೆ. ನಮ್ಮದು ದ್ರಾವಿಡ, ಬುಡಕಟ್ಟು ಮನಸ್ಥಿತಿ. ಆದರೆ, RSS ನದ್ದು ಆರ್ಯ ಸಮಾಜ ಪರಿಕಲ್ಪನೆಯಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲ ಉದ್ದೇಶವೇ ಬೇರೆ ಇದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಸಂಘದ ಪಥಸಂಚಲನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಸಂಘಟದ ಚಟುವಟಿಕೆಗಳ ನಿಷೇಧಕ್ಕೆ ಮನವಿ ಮಾಡಿದ್ದಾರೆ. ಈಗ ಕಾಂಗ್ರೆಸ್ ಶಾಸಕರೊಬ್ಬರ ಒಡೆತನದ ಶಾಲೆಯಲ್ಲೇ ಆರ್ಎಸ್ಎಸ್ ಕಾರ್ಯಕ್ರಮ ನಡೆದಿರುವುದನ್ನು ಉಲ್ಲೇಖಿಸಿ ಪ್ರಿಯಾಂಕ್ ಖರ್ಗೆ ಪತ್ರದ ಬಗ್ಗೆ ಹಲವರು ವ್ಯಂಗ್ಯ ಮಾಡುತ್ತಿದ್ದಾರೆ.