ಬೆಂಗಳೂರು: ನಾನು ಮುಖ್ಯಮಂತ್ರಿ ಆಗಿದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮದೇ ಪಕ್ಷದ ಆಡಳಿತದ ಬಗ್ಗೆ ಆರ್.ವಿ.ದೇಶಪಾಂಡೆ ಬೇಸರ ಹೊಂದಿರುವುದು ಬಹಿರಂಗವಾಗಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಆಗಿದೆ. ಜನರಿಗೆ ಅನುಕೂಲವಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಸರ್ಕಾರ ನಡೆಸಲು ಕಷ್ಟವಾಗಿದೆ. ಮುಖ್ಯಮಂತ್ರಿ ಇಂದಿರಾ ಕಿಟ್ ಕೊಡ್ತಾರೋ, ತೊಗರಿಬೇಳೆ ಎಂದು ತೆಂಗಿನಕಾಯಿ ಕೊಡ್ತಾರೋ ನಮಗೇ ಏನು ಕೊಡ್ತಾರೆ ಎಂದು ತಿಳಿಯದು . 'ಮಹಿಳೆಯರು ಎಲ್ಲಾ ಸೌಲಭ್ಯಗಳನ್ನೂ ಪಡೆಯುತ್ತಿದ್ದಾರೆ ಪುರುಷರಿಗೆ ಯಾವುದೇ ಯೋಜನೆಗಳು ಇಲ್ಲ. ಸರ್ಕಾರದ ಈ ಯೋಜನೆಗಳನ್ನು ಜನರಿಗೆ ತಲುಪಿಸಲು ರಚಿಸಿರುವ ಸಮಿತಿಗಳನ್ನು ನಿಭಾಯಿಸುವುದೇ ಆಗಿದೆ. ರಾಜ್ಯದಲ್ಲಿ ಅಭಿವೃದ್ಧಿಯ ವೇಗ ತಗ್ಗಿದೆ ಎಂದು ತಮ್ಮದೇ ಸರ್ಕಾರದ ಗ್ಯಾರಂಟಿಗಳ ವಿರುದ್ಧ ಆರ್.ವಿ ದೇಶಪಾಂಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಆಯೋಜಿಸಿದ ವೋಚ್ ಚೋರಿ ಕಾರ್ಯಕ್ರಮ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಭಾನುವಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಆರ್.ವಿ ದೇಶಪಾಂಡೆ ತಮ್ಮ ಅಸಮಾಧಾನ ಹೊರಹಾಕಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಗ್ಯಾರಂಟಿ ನಿಲ್ಲಿಸುವ ಬಗ್ಗೆ ಆರ್‌ವಿ ದೇಶಪಾಂಡೆ ಹೇಳಿಕೆ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್. ಅವರು ಸಿಎಂ ಆದಾಗ ಬೇಕಿದ್ರೆ ಗ್ಯಾರಂಟಿ ನಿಲ್ಲಿಸಲಿ. ಎಲ್ಲಿ ಅಭಿವೃದ್ಧಿ ನಿಂತಿದೆ? ಅಭಿವೃದ್ಧಿ ಕಾಮಗಾರಿಗೆ ಸಿಎಂ ಅಡಿಗಲ್ಲು ಹಾಕ್ತಿದ್ದಾರೆ. ನಮ್ಮ ಜಿಲ್ಲೆಗೆ ಸಿಎಂ ಮೂರು ಬಾರಿ ಭೇಟಿ ಕೊಟ್ಟಿದ್ದಾರೆ. ನವೆಂಬರ್ 7ಕ್ಕೆ ತುಮಕೂರು ವಿಶ್ವವಿದ್ಯಾಲಯ ಉದ್ಘಾಟನೆಗೆ ನನಗೆ ಸಿಎಂ ಹೇಳಿದ್ದಾರೆ. ತುಮಕೂರಿನ ಸರ್ಕಾರಿ ಆಸ್ಪತ್ರೆ ಕಟ್ಟಲು 130 ಕೋಟಿ ಮಂಜೂರು ಆಗಿದೆ. ಸರ್ಕಾರಿ ನರ್ಸಿಂಗ್ ಕಾಲೇಜು, ಇವೆಲ್ಲವೂ ಅಭಿವೃದ್ಧಿ ಅಲ್ಲವಾ..? ಅಭಿವೃದ್ಧಿ ಕುಂಠಿತ ಅಂದರೆ ಹೇಗೆ..? ಇವರು ಹೇಳಿದ್ರೆ ಮಾತ್ರ ಅಭಿವೃದ್ಧಿ ಕುಂಠಿತ ಆಗಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ, ಆದರೆ ಅದೇನು ಸರ್ಕಾರದ ಅಭಿಪ್ರಾಯ ಆಗೋದಿಲ್ಲವಲ್ಲ. ಸರ್ಕಾರ ಯೋಚಿಸಿಯೇ ಗ್ಯಾರಂಟಿ ಕೊಟ್ಟಿರೋದು ಎಂದು ದೇಶಪಾಂಡೆ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.