ಹಾಸನ: ಸಾರ್ವಜನಿಕರಿಗೆ ಶ್ರೀ ಹಾಸನಾಂಬೆ ದರ್ಶನದ ಮೊದಲ ದಿನವಾದ ಶುಕ್ರವಾರ ದೇವಿ ದರ್ಶನ ಸುಲಲಿತವಾಗಿ ನಡೆಯಿತು. ಗುರುವಾರ ರಾತ್ರಿ ಆರಂಭವಾದ ಮಳೆ ಶುಕ್ರವಾರ ಬೆಳಗ್ಗೆ 8 ಗಂಟೆವರೆಗೂ ಸುರಿದರೂ ಭಕ್ತರು ಮುಂಜಾನೆ 4 ಗಂಟೆಯಿಂದಲೇ ಧರ್ಮ ದರ್ಶನದ ಸಾಲಿನಲ್ಲಿ ನಿಂತು ಬೆಳಗ್ಗೆ 6 ಗಂಟೆಯಿಂದ ದೇವಿ ದರ್ಶನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಶುಕ್ರವಾರ ಬೆಳಗ್ಗೆಯೇ ದರ್ಶನಕ್ಕೆ ಮಾಡಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು. ಗೋಲ್ಡ್ ಕಾರ್ಡ್, 1000 ರೂ. ಟಿಕೆಟ್ ಪಡೆದವರು ಅರ್ಧ ಗಂಟೆಯಿಂದ 45 ನಿಮಿಷದೊಳಗೆ ದೇವಿಯ ದರ್ಶನ ಪಡೆದರು. ಬೆಳಗ್ಗೆ ಹೆಚ್ಚಿದ್ದ ಭಕ್ತರ ಸಂಖ್ಯೆ ಮಧ್ಯಾಹ್ನ ನಂತರ ಕಡಿಮೆ ಆಗಿತ್ತು. ಮಾಜಿ ಸಚಿವ ಎ.ಮಂಜು, ಎಂಎಲ್‌ಸಿ ಡಾ.ಸೂರಜ್ ರೇವಣ್ಣ, ಬ್ರಹ್ಮಾಂಡ ಗುರೂಜಿ ಮತ್ತಿತರ ಗಣ್ಯರು ಶುಕ್ರವಾರ ದೇವಿಯ ದರ್ಶನ ಪಡೆದರು.