ಬೆಂಗಳೂರು: ರಾಜ್ಯದ ಕೆಲವು ಅರಣ್ಯದೊಳಗೆ ಹಾಡಿಗಳಿದ್ದು, ಇಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳು ಸಾಕಿರುವ ಜಾನುವಾರುಗಳು ವನ್ಯಜೀವಿಗಳಿಂದ ಮೃತಪಟ್ಟರೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ಪ್ರತೀಕಾರಕ್ಕಾಗಿ ದನಕ್ಕೆ ಹಾಕಿದ್ದ ವಿಷದಿಂದ 5 ಹುಲಿಗಳು ಮೃತಪಟ್ಟಿದ್ದವು. ಈ ತಿಂಗಳ ಆದಿಯಲ್ಲೇ ಮತ್ತೊಂದು ಹುಲಿ ವಿಷಪ್ರಾಶನದಿಂದ ಮೃತಪಟ್ಟಿದೆ. ಹಾಡಿಯ ಜನರು ಹತಾಶರಾಗಿ, ಪ್ರತೀಕಾರಕ್ಕಾಗಿ ವಿಷ ಹಾಕುವುದನ್ನು ತಡೆಯಲು ಈ ಸೂಚನೆ ನೀಡಲಾಗಿದೆ ಎಂದರು. ಮುಖ್ಯಮಂತ್ರಿಗಳಿಗೆ ಹುಲಿ ಸಾವಿನ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅರಣ್ಯದೊಳಗಿನ ಹಾಡಿಯಲ್ಲಿರುವ ಜಾನುವಾರುಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪ್ರವಾಹದಲ್ಲಿ ಸಾವಿಗೀಡಾಗುವ ಜಾನುವಾರುಗಳಿಗೆ ನೀಡುವ ಪರಿಹಾರದ ಮೊತ್ತವನ್ನೇ ಈ ಜಾನುವಾರುಗಳಿಗೂ ನೀಡಲು ನಿರ್ಧರಿಸಲಾಗಿದ್ದು, ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಮುಖ್ಯಮಂತ್ರಿಗಳೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು. ತಾವು ಸಾಕಿದ ಜಾನುವಾರುಗಳು ಮೃತಪಟ್ಟಾಗ ಸಹಜವಾಗಿಯೇ ಆಕ್ರೋಶಕ್ಕೆ ಒಳಗಾಗುತ್ತಾರೆ. ಆದರೆ, ವನ್ಯಜೀವಿ ಹತ್ಯೆ ಅಪರಾಧವಾಗಿದ್ದು, ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ. ಅಕ್ಟೋಬರ್ 1ರಂದು ನಡೆದ ಹುಲಿ ಹತ್ಯೆಯ 4 ಶಂಕಿತರನ್ನು 48 ಗಂಟೆಯೊಳಗೆ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಈ ಕೃತ್ಯವನ್ನು ಯಾರೇ ಎಸಗಿದ್ದರೂ ಅವರಿಗೆ ಕಾನೂನು ರೀತ್ಯ ತಕ್ಕ ಶಿಕ್ಷೆ ಆಗುತ್ತದೆ. ತ್ವರಿತವಾಗಿ ಶಿಕ್ಷೆ ಆದರೆ ಅದು ಸ್ಪಷ್ಟ ಸಂದೇಶ ರವಾನಿಸುತ್ತದೆ. ಹೀಗಾಗಿ ತ್ವರಿತವಾಗಿ ಚಾರ್ಜ್ ಶೀಟ್ ಸಲ್ಲಿಸಲು ಸೂಚಿಸಲಾಗಿದೆ ಎಂದರು.
ಒಂದೊಮ್ಮೆ ಹುಲಿ ಹತ್ಯೆ ತಡೆಯುವಲ್ಲಿ ಅರಣ್ಯ ಇಲಾಖೆಯ ಯಾವುದೇ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರೆ, ಕರ್ತವ್ಯ ಲೋಪ ಆಗಿದ್ದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದು. ಈಗಾಗಲೇ ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಲಾಗಿದ್ದು, ವರದಿ ಬಂದ ಬಳಿಕ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಕಾಡಿನಂಚಿನ ಮತ್ತು ಕಾಡಿನೊಳಗೆ ಹಾಡಿಯಲ್ಲಿರುವ ಜನರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಮತ್ತು ವನ್ಯಜೀವಿಗಳೊಂದಿಗೆ ಅವರು ಸಹಬಾಳ್ವೆ ನಡೆಸಲು ಉತ್ತೇಜಿಸುವಂತೆ ಜನಸಂಪರ್ಕ ಸಭೆ ನಡೆಸಲೂ ಸೂಚನೆ ನೀಡಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದ್ದರಿಂದ ರೊಚ್ಚಿಗೆದ್ದ ದನಗಾಹಿಗಳು ಬೇಟೆಯಾಡಿದ್ದ ಹಸುವಿಗೆ ವಿಷಪ್ರಾಶನ ಮಾಡಿಸುವ ಮೂಲಕ ಮತ್ತು ಅದೇ ಹಸುವನ್ನು ತಿಂದು ಹುಲಿ ಸಾಯುವಂತೆ ಮಾಡಿದ್ದರು. ಬಳಿಕ ಅದರ ಕಳೇಬರವನ್ನು ಪೀಸ್- ಪೀಸ್ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ನಾಲ್ವರು ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಿ ಸೋಮವಾರಷ್ಟೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆರೋಪಿಗಳಾದ ಪಚ್ಚಮಲ್ಲ ಅಲಿಯಾಸ್ ಸಣ್ಣ, ಗಣೇಶ್ ಹಾಗೂ ಸಂಪು ಎಂಬುವರನ್ನು ನ್ಯಾಯಾಧೀಶರಾದ ಕಾವ್ಯಶ್ರೀ ಅವರೆದುರು ಹಾಜರುಪಡಿಸಿದ ಅರಣ್ಯಾಧಿಕಾರಿಗಳು, ಹೆಚ್ಚಿನ ವಿಚಾರಣೆಗೆ ಅವಕಾಶ ನೀಡಬೇಕೆಂದು ಕೋರಿದ್ದರು. ಈ ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಮೂವರನ್ನು ಐದು ದಿನಗಳ ಕಾಲ ಅರಣ್ಯ ಇಲಾಖೆ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದರೆ, ಗೋವಿಂದೇಗೌಡ, ಕುರಿಗಾಹಿಗಳಾದ ಕಂಬಣ್ಣ, ಮಂಜುನಾಥ್ ಎಂಬುವರನ್ನು ಸದ್ಯದ ಮಟ್ಟಿಗೆ ಅರಣ್ಯ ಇಲಾಖೆ ಕೈಬಿಟ್ಟಿದ್ದು, ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.