image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈ. ಲಿಮಿಟೆಡ್ ಪ್ರವರ್ತಕ ಎಸ್. ವಾಸುದೇವನ್ ಸಂಬಂಧಿಸಿದ 423.38 ಕೋಟಿ ಆಸ್ತಿ ಮುಟ್ಟುಗೊಲು ಹಾಕಿದ ಇ. ಡಿ

ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈ. ಲಿಮಿಟೆಡ್ ಪ್ರವರ್ತಕ ಎಸ್. ವಾಸುದೇವನ್ ಸಂಬಂಧಿಸಿದ 423.38 ಕೋಟಿ ಆಸ್ತಿ ಮುಟ್ಟುಗೊಲು ಹಾಕಿದ ಇ. ಡಿ

ಬೆಂಗಳೂರು: ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಪ್ರವರ್ತಕರುಗಳಿಗೆ ಸಂಬಂಧಿಸಿದ 423.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇ.ಡಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈ. ಲಿಮಿಟೆಡ್ ಹಾಗೂ ಅದರ ಮುಖ್ಯ ಪ್ರವರ್ತಕ ಎಸ್. ವಾಸುದೇವನ್ ಅವರು ಫ್ಲಾಟ್/ಮನೆಗಳನ್ನು ನೀಡುವುದಾಗಿ ಗ್ರಾಹಕರಿಂದ 927.22 ಕೋಟಿ ರೂ.ಗಳಷ್ಟು ಹಣ ಪಡೆದಿದ್ದರು. ಆದರೆ ನಿಗದಿತ ಸಮಯದಲ್ಲಿ ಯಾವುದೇ ಫ್ಲಾಟ್/ಮನೆಗಳನ್ನು ನಿರ್ಮಿಸಿ ಹೂಡಿಕೆದಾರರಿಗೆ ಹಸ್ತಾಂತರಿಸಿರಲಿಲ್ಲ. ಬದಲಿಯಾಗಿ ಗ್ರಾಹಕರಿಂದ ಹೂಡಿಕೆಯಾಗಿದ್ದ ಮನೆಗಳನ್ನು ವೈಯಕ್ತಿಕ ಆಸ್ತಿ ಖರೀದಿಗೆ, ತಮ್ಮ ಕುಟುಂಬ ಸದಸ್ಯರು ಸೇರಿದಂತೆ ಇತರೆ ಕೆಲ ವ್ಯಕ್ತಿಗಳಿಗೆ ವರ್ಗಾವಣೆಗೆ ಬಳಸಿದ್ದರು. ಆ ಮೂಲಕ ಯೋಜನೆಗಳ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ವಾಸ್ತವವಾಗಿ ಉದ್ದೇಶಿಸಲಾದ ಮನೆಗಳನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿದ್ದರು ಎಂದು ತನಿಖೆಯ ಮೂಲಕ ಬಹಿರಂಗವಾಗಿದೆ ಎಂದು ಇ.ಡಿ ಮಾಹಿತಿ ನೀಡಿದೆ. ಗ್ರಾಹಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈ. ಲಿಮಿಟೆಡ್‌ನ ಸ್ಥಿರ ಆಸ್ತಿಗಳು (ಮಾರಾಟವಾಗದ ಸ್ಟಾಕ್, 92 ಫ್ಲಾಟ್‌ಗಳು) ಮತ್ತು ಅಕ್ವಾ 2 ಯೋಜನೆಗಳ ಆಸ್ತಿ (13 ಫ್ಲಾಟ್‌ಗಳು, 4.5 ಎಕರೆ ವಾಣಿಜ್ಯ ಭೂಮಿ) ಮತ್ತು ಎಸ್. ವಾಸುದೇವನ್ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಮೂಡಿಗೆರೆಯ ಕನ್ನೆಹಳ್ಳಿ ಗ್ರಾಮದಲ್ಲಿರುವ 179 ಎಕರೆ ಭೂಮಿ ಸೇರಿದಂತೆ ಒಟ್ಟು 423.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ವಿವರಿಸಿದೆ.

ಫ್ಲಾಟ್/ಮನೆಗಳನ್ನು ನಿರ್ಮಿಸಿ, ಅವುಗಳನ್ನು ಹಸ್ತಾಂತರಿಸುವವರೆಗೂ ನಿರ್ಮಾಣ ಪೂರ್ವದಲ್ಲಿ ಸಾಲದ ಕಂತುಗಳನ್ನು ಪಾವತಿಸುವುದಾಗಿ ಆಫರ್ ನೀಡಿದ್ದ ಓಜೋನ್ ಅರ್ಬನಾ ಇನ್ಫ್ರಾ ಕಂಪನಿ ಗ್ರಾಹಕರಿಂದ ಮುಂಗಡವಾಗಿ ಕೋಟ್ಯಂತರ ರೂ. ಹಣ ಹೂಡಿಕೆ‌ ಮಾಡಿಸಿತ್ತು. ಆದರೆ ನಿರ್ಮಾಣ ಕಾರ್ಯವನ್ನು ಸಕಾಲದಲ್ಲಿ ಪೂರ್ಣಗೊಳಿಸುವಲ್ಲಿ ಹಾಗೂ ಗ್ರಾಹಕರಿಗೆ ಫ್ಲಾಟ್ ಹಸ್ತಾಂತರಿಸುವಲ್ಲಿ ವಿಫಲವಾಗಿರುವ ಬಗ್ಗೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈ. ಲಿಮಿಟೆಡ್ ಮತ್ತು ಅದರ ಪ್ರವರ್ತಕರ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಸಿಬಿಐನಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಇ.ಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಕಳೆದ ಆಗಸ್ಟ್ 1ರಂದು ಓಜೋನ್ ಇನ್ಫ್ರಾ ಪ್ರೈ ಲಿಮಿಟೆಡ್ ಹಾಗೂ ಅದರ ಪ್ರವರ್ತಕರುಗಳಿಗೆ ಸಂಬಂಧಿಸಿದ 10 ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದರು.

Category
ಕರಾವಳಿ ತರಂಗಿಣಿ