image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎಲ್ಲೆಂದರಲ್ಲಿ ಬೇಕಾಬಿಟ್ಟಿ ಕಟ್ಟಡ ತ್ಯಾಜ್ಯ ಹಾಗೂ ಕಸ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದ ಉಪಮುಖ್ಯಮಂತ್ರಿ

ಎಲ್ಲೆಂದರಲ್ಲಿ ಬೇಕಾಬಿಟ್ಟಿ ಕಟ್ಟಡ ತ್ಯಾಜ್ಯ ಹಾಗೂ ಕಸ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದ ಉಪಮುಖ್ಯಮಂತ್ರಿ

ಬೆಂಗಳೂರು: ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಹಾಗೂ ಕಸವನ್ನು ಎಸೆಯುವರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಹಾಗೂ ರಸ್ತೆ ದುರಸ್ತಿಗಳನ್ನು ಅತ್ಯಂತ ವೇಗವಾಗಿ ಅಧಿಕಾರಿಗಳು ಮಾಡುತ್ತಿದ್ದಾರೆ. ದಸರಾ ರಜೆ ಇದ್ದ ಕಾರಣಕ್ಕೆ ಎಲ್ಲೆಂದರಲ್ಲಿ ಕಸದ ಸಮಸ್ಯೆ ಹೆಚ್ಚಿದೆ. ಇದಕ್ಕೂ ಸಹ ಒಂದು ಅಭಿಯಾನ ನಡೆಸಲಾಗುವುದು. ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಹಾಗೂ ಕಸವನ್ನು ಎಸೆಯುವರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಬೆಂಗಳೂರನ್ನು ಸ್ವಚ್ಛವಾಗಿ ಇಡಲು ಎಲ್ಲೆಂದರಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕಲು ಡಬ್ಬಿಗಳನ್ನು ಇಡುವ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಪಾಲಿಕೆಗಳ ಆಯುಕ್ತರಿಗೆ ವರದಿ ನೀಡಿ ಎಂದು ಹೇಳಿದ್ದೇನೆ. ಜಿಬಿಎ ಹಾಗೂ ಐದು ಪಾಲಿಕೆಗಳ ಆಯುಕ್ತರು ಸೇರಿ ಇತರೆ ನಗರಗಳಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಎಂಬುದನ್ನು ತಿಳಿದುಕೊಂಡು ವರದಿ ನೀಡಿ ಎಂದು ತಿಳಿಸಿದ್ದೇನೆ. ಜನರು ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕರು ಸಹ ಇದಕ್ಕೆ ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದರೆ ಅದರ ಫೋಟೋ ತೆಗೆದು ಪಾಲಿಕೆಗಳು ಸೂಚಿಸಿರುವ ದೂರವಾಣಿ ಸಂಖ್ಯೆಗೆ ಕಳುಹಿಸಬೇಕು ಎಂದು ತಿಳಿಸಿದರು. ಏಕ ಬಳಕೆಯ ಪ್ಲಾಸ್ಟಿಕ್ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವವರಿಂದ 1 ಕೋಟಿ ರೂಪಾಯಿ ದಂಡ ಸಂಗ್ರಹ ಮಾಡಲಾಗಿದೆ. ಜೊತೆಗೆ ಕಸ ಸಂಗ್ರಹ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಈ ಮೊದಲು 198 ವಾರ್ಡ್​ಗಳು ಮಾತ್ರ ಇದ್ದವು ಈಗ 300ಕ್ಕೂ ಹೆಚ್ಚು ವಾರ್ಡ್​ಗಳು ಆಗುತ್ತಿರುವುದರಿಂದ ಕಸ ಸಂಗ್ರಹ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗುವುದು ಎಂದರು.

Category
ಕರಾವಳಿ ತರಂಗಿಣಿ