image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಾಯಿಬಿಟ್ಟು ಹೇಳಿಬಿಡಿ ಪವರ್ ಶೇರಿಂಗ್ ಇಲ್ಲ ಎಂದು - ಸುರ್ಜೇವಾಲಾ ಮುಂದೆ ಅಸಮಧಾನ ವ್ಯಕ್ತಪಡಿಸಿದ ಡಿಕೆಶಿ

ಬಾಯಿಬಿಟ್ಟು ಹೇಳಿಬಿಡಿ ಪವರ್ ಶೇರಿಂಗ್ ಇಲ್ಲ ಎಂದು - ಸುರ್ಜೇವಾಲಾ ಮುಂದೆ ಅಸಮಧಾನ ವ್ಯಕ್ತಪಡಿಸಿದ ಡಿಕೆಶಿ

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಸಿಎಂ ಸ್ಥಾನದ ಬಗ್ಗೆ ಕಳೆದ ಹಲವು ತಿಂಗಳುಗಳಿಂದಲೇ ಚರ್ಚೆ ನಡೆಯುತ್ತಲೇ ಇದೆ. ಅತ್ತ ಸಿದ್ದರಾಮಯ್ಯ ಪದೇ ಪದೇ ನಾನೇ ಪೂರ್ಣಾವಧಿ ಸಿಎಂ ಎಂದರೆ ಇತ್ತ ಡಿಸಿಎಂ ಡಿಕೆ ಶಿವಕುಮಾರ್‌ ಮತ್ತೆ ಮತ್ತೆ ಸಿಎಂ ಆಗುವ ಆಸೆಯನ್ನು ತೋರ್ಪಡಿಸುತ್ತಲೇ ಇದ್ದಾರೆ. ಈ ನಡುವೆ ಡಿಕೆಶಿ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರೊಂದಿಗೆ ಸಭೆ ನಡೆಸಿ ಪವರ್‌ ಶೇರಿಂಗ್‌ ಸಂಬಂಧ ಚರ್ಚೆ ನಡೆಸಿದ್ದಾರೆ. ಸುರ್ಜೇವಾಲಾ ಅವರೊದಿಗಿನ ಚರ್ಚೆಯಲ್ಲಿ ಡಿಸಿಎಂ ಡಿಕೆಶಿವಕುಮಾರ್‌ ಸಾಕಷ್ಟು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಸಿಎಂ ವಿಚಾರ ಪ್ರಸ್ತಾಪ ಮಾಡಿದವರಿಗೆ ನಾನು ನೋಟಿಸ್‌ ಕೊಟ್ಟಿದೇನೆ. ಶಾಸಕ ರಂಗನಾಥ್‌, ಮಾಜಿ ಸಂಸದ ಶಿವರಾಮೇಗೌಡಗೆ ಎಚ್ಚರಿಸಿದ್ದೇನೆ. ಇಬ್ಬರೂ ನಮ್ಮ ಸಂಬಂಧಿಕರಾದರೂ ನಾನು ನೋಟಿಸ್‌ ಕೊಟ್ಟಿದ್ದೇನೆ. ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಸೂಚನೆ ಕೊಡಬೇಕು ಎಂದು ಹೇಳಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ನಾನು ಸಾಕಷ್ಟು ಶ್ರಮ ಹಾಕಿದ್ದೇನೆ. ತನು ಮನ ಧನ ಅರ್ಪಿಸಿ ಪಕ್ಷದ ಸಂಘಟನೆ ಮಾಡಿದ್ದೇನೆ. ನನ್ನ ಶ್ರಮಕ್ಕೂ ಪ್ರತಿಫಲ ಸಿಗಬೇಕಲ್ವಾ? ಹೈಕಮಾಂಡ್‌ ಮಟ್ಟದಲ್ಲಿ ನನಗೆ ಒಂದು ಸ್ಪಷ್ಟತೆ ಕೊಡಿಸಿ. ಪವರ್‌ ಶೇರಿಂಗ್‌ ಇಲ್ಲ ಅಂದರೆ ಸ್ಪಷ್ಟವಾಗಿ ಹೇಳಿಬಿಡಿ ಎಂದು ಶಿವಕುಮಾರ್‌ ಮನವಿ ಮಾಡಿದ್ದಾರೆ.

ಇನ್ನು ಇದಕ್ಕೂ ಮೊದಲು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಸುರ್ಜೇವಾಲಾ, ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಆ ಕುರಿತು ಮಾತನಾಡುವವರ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಸೇರಿ ಸರ್ಕಾರದಲ್ಲಿ ಬದಲಾವಣೆ ತರುವಂತಹ ಯಾವುದೇ ಚರ್ಚೆಗಳೂ ಹೈಕಮಾಂಡ್‌ ಮಟ್ಟದಲ್ಲಿಲ್ಲ. ಆದರೂ ಪಕ್ಷದ ಶಿಸ್ತು ಉಲ್ಲಂಘಿಸಿ ಕೆಲವರು ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಭಾವನಾತ್ಮವಾಗಿ ಮಾತನಾಡುತ್ತಿದ್ದಾರೆ. ಅವರನ್ನು ಪಕ್ಷದ ಚೌಕಟ್ಟಿನಲ್ಲಿರುವಂತೆ ನೋಡಿಕೊಳ್ಳುವ ಅಧಿಕಾರ ಡಿಕೆ ಶಿವಕುಮಾರ್‌ ಅವರಿಗಿದ್ದು, ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದರು. ಯಾರೇ ಆದರೂ ಪಕ್ಷದ ಚೌಕಟ್ಟು ಮೀರಿ ಮಾತನಾಡಬಾರದು. ತಮ್ಮ ಭಾವನೆಗಳನ್ನು ಪಕ್ಷದ ವೇದಿಕೆಯಲ್ಲಿ ವ್ಯಕ್ತಪಡಿಸಬೇಕು. ಅವರನ್ನು ಹದ್ದುಬಸ್ತಿನಲ್ಲಿಡುವುದು ಮತ್ತು ಪಕ್ಷದ ಶಿಸ್ತಿಗೆ ಚ್ಯುತಿ ಬರದಂತೆ ನಡೆದುಕೊಳ್ಳುವಂತೆ ಮಾಡಲು ಡಿಕೆ ಶಿವಕುಮಾರ್‌ ಅವರಿಗೆ ಸೂಚಿಸಲಾಗಿದೆ. ಕರ್ನಾಟಕದ ಜನರಿಗೆ ಉತ್ತಮ ಆಡಳಿತ ನೀಡುವುದರತ್ತ ಎಲ್ಲರ ಗಮನವಿರಬೇಕು. ಜನರ ಜೀವನ ಬದಲಿಸುವಂತಹ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ, ಫಲಾನುಭವಿಗಳಿಗೆ ತಲುಪುವಂತೆ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ