image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮುಂಗಾರು ಮಳೆಯಿಂದ ರಾಜ್ಯದಲ್ಲಿ ಒಟ್ಟು 9.60 ಲಕ್ಷ ಹೆಕ್ಟೇರ್‌ ಬೆಳೆಹಾನಿ!

ಮುಂಗಾರು ಮಳೆಯಿಂದ ರಾಜ್ಯದಲ್ಲಿ ಒಟ್ಟು 9.60 ಲಕ್ಷ ಹೆಕ್ಟೇರ್‌ ಬೆಳೆಹಾನಿ!

ಕಲಬುರಗಿ: ಮುಂಗಾರು ಮಳೆಯಿಂದ ರಾಜ್ಯದಲ್ಲಿ ಈತನಕ ಒಟ್ಟು 9.60 ಲಕ್ಷ ಹೆಕ್ಟೇರ್‌ ಬೆಳೆಹಾನಿಯಾಗಿದೆ. ಅದರಲ್ಲಿ ಶೇ95ರಷ್ಟು ಬೆಳೆಹಾನಿ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲೇ ಸಂಭವಿಸಿದೆ!. ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ಬೀದರ್‌ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ನದಿಗಳ ಪ್ರವಾಹದಿಂದ ಉಂಟಾದ ಹಾನಿ ಅರಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಭಾಗದ ಸಚಿವರೊಂದಿಗೆ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. 'ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಈ ಸಲ ವ್ಯಾಪಕ ಮಳೆಯಾಗಿದೆ. ವಿಜಯಪುರದಲ್ಲಿ ವಾಡಿಕೆಗಿಂತಲೂ ಶೇ 58ರಷ್ಟು, ಬಾಗಲಕೋಟೆಯಲ್ಲಿ ಶೇ 37ರಷ್ಟು, ಕಲಬುರಗಿಯಲ್ಲಿ ಶೇ 34ರಷ್ಟು, ಯಾದಗಿರಿಯಲ್ಲಿ ಶೇ 29ರಷ್ಟು, ಬೆಳಗಾವಿಯಲ್ಲಿ ಶೇ 26ರಷ್ಟು, ರಾಯಚೂರಿನಲ್ಲಿ ಶೇ 21ರಷ್ಟು, ಗದುಗಿನಲ್ಲಿ ಶೇ 17ರಷ್ಟು ಹಾಗೂ ಬೀದರ್‌ನಲ್ಲಿ ಶೇ 16ರಷ್ಟು ಹೆಚ್ಚುವರಿ ಮಳೆಯಾಗಿದೆ' ಎಂದು ಮುಖ್ಯಮಂತ್ರಿ ಹೇಳಿದರು.

'ರಾಜ್ಯದಲ್ಲಿ ಬೆಳೆ ಹಾನಿ ಬಗೆಗೆ ಈತನಕ ಐದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರವೇ ಜಂಟಿ ಸಮೀಕ್ಷೆ ನಡೆಸಲು ಸಾಧ್ಯವಾಗಿದೆ. ಇನ್ನೂ ಸಾಕಷ್ಟು ಬೆಳೆಗಳು ಹಾನಿಯಾಗಿದ್ದು, ರೈತರ ಭೂಮಿಗೆ ಹೋಗಿ ಸಮೀಕ್ಷೆ ಮಾಡದಷ್ಟು ತೇವಾಂಶ ಹೊಲಗಳಲ್ಲಿದೆ' ಎಂದರು. 'ಪ್ರಾಥಮಿಕ ವರದಿ ಪ್ರಕಾರ ರಾಜ್ಯದಲ್ಲಿ ಈತನಕ ಒಟ್ಟಾರೆ 9,60,578 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅದರಲ್ಲಿ ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್‌, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ 9,03,966 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಒಟ್ಟಾರೆ ಹಾನಿಗೆ ಹೋಲಿಸಿದರೆ, ಶೇ 95ರಷ್ಟು ಹಾನಿ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲೇ ಸಂಭವಿಸಿದೆ' ಎಂದು ವಿವರಿಸಿದರು. 'ಒಟ್ಟು 9.60 ಲಕ್ಷ ಹೆಕ್ಟೇರ್‌ ಬೆಳೆಹಾನಿ ಪೈಕಿ 8,88,953 ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆಗಳು ಹಾಗೂ 71,624 ಹೆಕ್ಟೇರ್‌ಗಳಷ್ಟು ತೋಟಗಾರಿಕಾ ಬೆಳೆಗಳು ಹಾನಿಯಾಗಿರುವ ಅಂದಾಜಿದೆ' ಎಂದು ಸಿದ್ದರಾಮಯ್ಯ ಹೇಳಿದರು.

Category
ಕರಾವಳಿ ತರಂಗಿಣಿ