image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಮಿಷನ್ ದುಪ್ಪಟ್ಟು, 33 ಸಾವಿರ ಕೋಟಿ ರೂ. ಬಾಕಿ, ಸಿಡಿದೆದ್ದ ಕಂಟ್ರಾಕ್ಟರ್ಸ್ ಅಸೋಸಿಯೇಷನ್

ಕಮಿಷನ್ ದುಪ್ಪಟ್ಟು, 33 ಸಾವಿರ ಕೋಟಿ ರೂ. ಬಾಕಿ, ಸಿಡಿದೆದ್ದ ಕಂಟ್ರಾಕ್ಟರ್ಸ್ ಅಸೋಸಿಯೇಷನ್

ಬೆಂಗಳೂರು : ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತೀವ್ರ ಅಸಮಾಧಾನ ಹೊರ ಹಾಕಿದೆ. ಹಲವು ಇಲಾಖೆಗಳಲ್ಲಿನ ಕಮಿಷನ್ ದರ ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟಾಗಿದೆ ಎಂದು ಅಸೋಸಿಯೇಷನ್ ಗಂಭೀರ ಆರೋಪ ಮಾಡಿದೆ. ಅಸೋಸಿಯೇಷನ್ ತನ್ನ ಪತ್ರದಲ್ಲಿ, ನಿಮ್ಮ ಸರ್ಕಾರದಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಗುತ್ತಿಗೆದಾರರಿಗೆ ಸರಕಾರದಿಂದ 33 ಸಾವಿರ ಕೋಟಿ ರೂ. ಬಾಕಿ ಉಳಿದಿದೆ. ಕಳೆದ ಎರಡು ವರ್ಷಗಳಿಂದ ಬಾಕಿ ಹಣ ಬಿಡುಗಡೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಅನೇಕ ಸುತ್ತಿನ ಸಭೆಗಳು ನಡೆದಿವೆ. ಪ್ರತಿಯೊಂದು ಸಭೆಯಲ್ಲೂ ನಮ್ಮನ್ನು ಸಮಾಧಾನಪಡಿಸಿ, ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ. ನಾವು ನಿಮಗೆ ಗೌರವ ಕೊಟ್ಟು, ನಿಮ್ಮ ಭರವಸೆಯಿಂದ ತಾಳ್ಮೆಯಿಂದ ಕಾಯುತ್ತಿದ್ದೇವೆ. ಆದರೆ, ಇದುವರೆಗೆ ಯಾವುದೇ ಸ್ಪಷ್ಟ ಫಲಿತಾಂಶ ಕಾಣಲಿಲ್ಲ" ಎಂದು ತಿಳಿಸಿದೆ. ಪತ್ರದಲ್ಲಿ ಗುತ್ತಿಗೆದಾರರು ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ, ಕೆಲ ಪ್ರಮುಖ ಇಲಾಖೆಗಳಲ್ಲಿನ ಕಮಿಷನ್ ದರ ಹಿಂದಿನ ಸರ್ಕಾರದ ಅವಧಿಗಿಂತ ಇಂದಿನ ಸರ್ಕಾರದಲ್ಲಿ ಹೆಚ್ಚಾಗಿದೆ. ಅಸೋಸಿಯೇಷನ್ ಈ ಪರಿಸ್ಥಿತಿಯನ್ನು ತೀವ್ರವಾಗಿ ಖಂಡಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಗುತ್ತಿಗೆದಾರರು ಇನ್ನೂ ವಿವರಿಸಿರುವಂತೆ, ಬಾಕಿ ಹಣ ಬಿಡುಗಡೆ ಆಗದೆ ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವರು ತಮ್ಮ ಕಾರ್ಯಗಳನ್ನು ನಿಲ್ಲಿಸಲು ಮುಂದಾಗಿದ್ದಾರೆ. ಸರ್ಕಾರದ ಬಾಕಿ ಹಣ ಪಾವತಿಯಾಗದೇ, ಬ್ಯಾಂಕುಗಳ ಸಾಲದ ಒತ್ತಡ, ಉದ್ಯೋಗಿಗಳ ವೇತನ ಸಮಸ್ಯೆ, ಸಾಮಗ್ರಿಗಳ ಪೂರೈಕೆ ತೊಂದರೆ ಇವೆಲ್ಲವೂ ಗುತ್ತಿಗೆದಾರರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಅಸೋಸಿಯೇಷನ್ ಪತ್ರದಲ್ಲಿ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿ, ನಾವು ಯಾವ ಸರ್ಕಾರದ ವಿರುದ್ಧ ಶತ್ರುತ್ವವಿಲ್ಲ. ಆದರೆ, ನಮ್ಮ ಬದುಕು, ನಮ್ಮ ಉದ್ಯಮ, ನಮ್ಮ ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿವೆ. ನಿಮ್ಮ ಸರ್ಕಾರದಿಂದಲೂ ಯಾವುದೇ ಧನಾತ್ಮಕ ಸ್ಪಂದನೆ ದೊರೆಯದೇ ಇರುವುದರಿಂದ ನಿರಾಶೆ ಹೆಚ್ಚಾಗಿದೆ ಎಂದು ಕಹಿ ಮನಸ್ಸು ಹಂಚಿಕೊಂಡಿದೆ. ಗುತ್ತಿಗೆದಾರರು ತಮ್ಮ ಪತ್ರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಬಾಕಿ ಹಣ ಬಿಡುಗಡೆ ಮಾಡದಿದ್ದಲ್ಲಿ, ಹಾಗೂ ಕಮಿಷನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ, ಗುತ್ತಿಗೆದಾರರು ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಸೂಚಿಸಿದ್ದಾರೆ.

Category
ಕರಾವಳಿ ತರಂಗಿಣಿ