ಬೆಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ನಡೆದ ಗಲಭೆ ಸಂಬಂಧ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವರದಿ ಸಲ್ಲಿಸಿತು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ನೇತೃತ್ವದಲ್ಲಿ ರಚಿಸಲಾಗಿದ್ದ ಬೈರತಿ ಬಸವರಾಜ್, ಭಾಸ್ಕರ ರಾವ್, ನಾರಾಯಣಗೌಡರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿತು. ನಾಗಮಂಗಲ ಗಲಭೆ ಘಟನೆ ಸಂಬಂಧ ಸ್ಥಳದ ಅಧ್ಯಯನ ಕುರಿತಾದ ಸಮಗ್ರ ವಿವರಗಳನ್ನೊಳಗೊಂಡ ವಿಸ್ತೃತ ವರದಿಯನ್ನು ಸಲ್ಲಿಕೆ ಮಾಡಿತು. ವರದಿ ಸ್ವೀಕರಿಸಿದ ವಿಜಯೇಂದ್ರ ಫೋಟೋ ಪ್ರತಿಗಳನ್ನು ಒಳಗೊಂಡ ವಿವರಣೆಯನ್ನು ಪರಿಶೀಲಿಸಿದರು. ಕಾಲಮಿತಿಯಲ್ಲಿ ವರದಿ ನೀಡಿದ ತಂಡವನ್ನು ಶ್ಲಾಘಿಸಿದರು.
ನಂತರ ಮಾತನಾಡಿದ ವಿಜಯೇಂದ್ರ, "ನಾಗಮಂಗಲದಲ್ಲಿ ಹಿಂದು ಯುವಕರು ಗಣೇಶೋತ್ಸವ ಮಾಡುವಾಗ ಒಂದು ಕೋಮಿನ ದೇಶದ್ರೋಹಿಗಳು ಕತ್ತಿ ತಲ್ವಾರ್ ತಗೊಂಡು, ಹಿಂದೂಗಳ ಅಂಗಡಿ ಮುಂಗಟ್ಟಿನ ಮೇಲೆ ದಾಳಿ ಮಾಡಿದ್ದರು. ಆಸ್ತಿ ಪಾಸ್ತಿ ನಷ್ಟ ಮಾಡಿದ್ದರು. ಪೊಲೀಸ್ ಕಣ್ಮುಂದೆ ನಡೆದಿದ್ದ ದುರ್ಘಟನೆ ಇದಾಗಿತ್ತು. ನಾವು ನಾಗಮಂಗಲಕ್ಕೆ ಹೋಗಿದ್ದೆವು. ಪ್ರತ್ಯಕ್ಷವಾಗಿ ಜನರನ್ನು ಮಾತನಾಡಿಸಿದ್ದೇವೆ. ಡಾ.ಅಶ್ವತ್ ನಾರಾಯಣ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೆವು. ಅಲ್ಲಿನ ಸತ್ಯಾಸತ್ಯತೆ ಅರ್ಥ ಮಾಡಿಕೊಂಡು ವರದಿ ನೀಡಿದ್ದಾರೆ. ಗಲಭೆ ಘಟನೆ ಕುರಿತು ಎನ್ಐಎ ತನಿಖೆ ಅಗತ್ಯವಿದೆ" ಎಂದರು.