image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಪ್ರಾರಂಭ

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಪ್ರಾರಂಭ

ಮೈಸೂರು: ವಿಶ್ವದ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2025 ನವರಾತ್ರಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಡದೇವಿ ಚಾಮುಂಡಿ ಸನ್ನಿಧಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ಸೋಮವಾರದಿಂದ (ಸೆ.22) ರತ್ನ ಖಚಿತ ಸಿಂಹಾಸನವೇರಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಈಗಾಗಲೇ ಅರಮನೆಯ ಸ್ಟ್ರಾಂಗ್ ರೂಮ್‌ನಿಂದ ಸಿಂಹಾಸನ ತಂದು ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ 5.30 ರಿಂದ 5.45ರೊಳಗೆ ಸಿಂಹಾಸನಕ್ಕೆ ಸಿಂಹ ಜೋಡಣೆಯಾಗಲಿದೆ. ನಂತರ ಬೆಳಗ್ಗೆ 9.55 ರಿಂದ 10.15ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌‌ ಅವರಿಗೆ ಕಂಕಣ ಧಾರಣೆ ನಡೆಯಲಿದೆ. ಬೆಳಗ್ಗೆ 11.35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಮಂಗಳವಾದ್ಯದೊಂದಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ಸವಾರಿ ತೊಟ್ಟಿಯ ಬಳಿ ಪಟ್ಟದ ಆನೆ, ಕುದುರೆ, ಹಸು ಜೊತೆ ಮಹಿಳೆಯರು ಕಳಸ ಹೊತ್ತು ತಂದು ಪೂಜೆ ನೆರವೇರಿಸಲಾಗುತ್ತದೆ‌. ಸೆ.22ರಿಂದ 29ರ ವರೆಗೆ ಖಾಸಗಿ ದರ್ಬಾರ್ ಜರುಗಲಿದೆ. ಸೆ.29ರಂದು ಬೆಳಗ್ಗೆ 10.10ರಿಂದ 10.30ರ ಒಳಗೆ ಯದುವೀರ್‌ ಒಡೆಯರ್ ಅವರು ಸರಸ್ವತಿ ಪೂಜೆ ನೆರವೇರಿಸಲಿದ್ದಾರೆ. ಅಂದು ರಾತ್ರಿಯೇ ಖಾಸಗಿ ದರ್ಬಾರ್ ಕೊನೆಗೊಳ್ಳಲಿದೆ. ಖಾಸಗಿ ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ ನಡೆಯಲಿದೆ. ಆಯುಧ ಪೂಜೆಯ ದಿನದಂದು ಬೆಳಗ್ಗೆ 6 ಗಂಟೆಗೆ ಚಂಡಿಹೋಮ ಆರಂಭವಾಗಲಿದೆ. ಬೆಳಗ್ಗೆ 7.30 ರಿಂದ 7.42ರ ಒಳಗೆ ಪಟ್ಟದ ಕತ್ತಿ ಸೇರಿದಂತೆ ಖಾಸಗಿ ಆಯುಧಗಳಿಗೆ ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಗುತ್ತದೆ.

ಬೆಳಗ್ಗೆ 8 ರಿಂದ 8.40ರ ಒಳಗೆ ಕತ್ತಿ ಹಾಗೂ ಖಾಸಗಿ ಆಯುಧಗಳನ್ನು ಕಲ್ಯಾಣ ಮಂಟಪದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಅಂದು ಸಂಜೆ ಯದುವೀರ್ ಒಡೆಯರ್ ಕಂಕಣ ವಿಸರ್ಜನೆ ಮಾಡುತ್ತಾರೆ. ಅಕ್ಟೋಬರ್ 2ರಂದು ಬೆಳಗ್ಗೆ 10 ಗಂಟೆಗೆ ವಿಜಯದಶಮಿ ಪೂಜೆ ನೆರವೇರಲಿದೆ. 10.55ರಿಂದ ವಿಜಯಯಾತ್ರೆ ಆರಂಭವಾಗಲಿದೆ. ಎಲ್ಲಾ ಪೂಜೆ ಮುಗಿದ ಬಳಿಕ ಜಂಬೂಸವಾರಿಗೆ ಚಾಲನೆ ದೊರೆಯಲಿದೆ. ಖಾಸಗಿ ದರ್ಬಾರ್​ಗಾಗಿ ಅರಮನೆ ಅರ್ಚಕರು, ಅರಮನೆ ಆವರಣದಲ್ಲಿರುವ ದೇವಾಲಯಗಳು, ಅರಮನೆ ಕುಲದೇವತೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲ, ಉತ್ತನಹಳ್ಳಿ ಮಾರಮ್ಮ, ನಂಜನಗೂಡಿನ ಶ್ರೀಕಂಠೇಶ್ವರ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇಗುಲ ಸೇರಿದಂತೆ 23 ದೇವಾಲಯಗಳಿಂದ ತರುವ ತೀರ್ಥವನ್ನು ಸಿಂಹಾಸನಕ್ಕೆ ಪ್ರೋಕ್ಷಣೆ, ಪೂಜೆ ಮಾಡಿದ ನಂತರ ಯದುವೀರ್ ಸಿಂಹಾಸನ ಏರಲಿದ್ದಾರೆ. ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಗುವ ಚಾಮುಂಡೇಶ್ವರಿ ವಿಗ್ರಹಕ್ಕೆ ಭಕ್ತಿಯಿಂದ ನಮಿಸಿ ಯದುವೀರ್ ಸಿಂಹಾಸನರೂಢರಾಗುತ್ತಾರೆ. ಸಿಂಹಾಸನದಿಂದ ಇಳಿಯುವ ಮುನ್ನ ಅದರ ಮೇಲೆ ನಿಂತು ಸೆಲ್ಯೂಟ್ ಮಾಡುತ್ತಾರೆ. ಅರಮನೆ ಸಂಸ್ಥಾನದ ಗೀತೆಯಾದ 'ಕಾಯೌ ಶ್ರೀ ಗೌರಿ' ವಾದ್ಯ ಸಂಗೀತ ನುಡಿಸಿದ ನಂತರ, ರಾಜಮನೆತನದ ಸದಸ್ಯರು ವಂದನೆ ಸಲ್ಲಿಸುತ್ತಾರೆ. ಪೊಲೀಸ್ ಬ್ಯಾಂಡ್​ನಿಂದ ಮಹಾಗಣಪತಿಂ, ಸರಸ್ವತಿ ಭಗವತಿಂ, ಐಗಿರಿ ನಂದಿನಿ, ವಿಜಯಾಂಬಿಕೆ, ಶ್ರೀ ಚಾಮುಂಡೇಶ್ವರಿ ಸೇರಿದಂತೆ ನಾನಾ ಸಂಗೀತವನ್ನು ನುಡಿಸಲಾಗುವುದು. ಯದುವೀರ್ 11ನೇ ಖಾಸಗಿ ದರ್ಬಾರ್: ಯದುವಂಶಸ್ಥರಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ, ಈ ಬಾರಿಯ ಖಾಸಗಿ ದರ್ಬಾರ್ 11ನೇಯದಾಗಿದೆ‌. ಅಲ್ಲದೇ ಸಂಸದರಾಗಿ ಎರಡನೇ ಬಾರಿಗೆ ಯದುವೀರ್​ ಅವರು ದರ್ಬಾರ್​ ನಡೆಸುತ್ತಿದ್ದಾರೆ. ಸಿಂಹಾಸನದಿಂದ ಇಳಿದ ಬಳಿಕ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಅವರು, ಯದುವೀರ್ ಅವರಿಗೆ ದೃಷ್ಟಿ ತೆಗೆದು ಪೂಜೆ ಮಾಡುತ್ತಾರೆ.

Category
ಕರಾವಳಿ ತರಂಗಿಣಿ