ಬೆಂಗಳೂರು: ಗೋವಾ ಅರಣ್ಯ ಸಚಿವ ವಿಶ್ವಜಿತ್ ರಾಣೆ ಅವರು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಅವರನ್ನು ವಿಕಾಸಸೌಧದ ಸಚಿವರ ಕೊಠಡಿಯಲ್ಲಿಂದು ಭೇಟಿಯಾಗಿ ಕುಮ್ಕಿ ಆನೆ ನೀಡುವಂತೆ ಮನವಿ ಮಾಡಿದರು. ಗೋವಾದಲ್ಲಿ ಪುಂಡಾನೆಗಳ ಹಾವಳಿ ಹೆಚ್ಚಾಗಿದ್ದು, ಕರ್ನಾಟಕದ ಸಹಕಾರ ಕೋರಿದ್ದಾರೆ. ಪುಂಡಾನೆಗಳ ಹಾವಳಿ ನಿಯಂತ್ರಣಕ್ಕೆ ಕುಮ್ಕಿ ಆನೆಗಳನ್ನು ನೀಡುವಂತೆ ಖಂಡ್ರೆ ಅವರಲ್ಲಿ ಮನವಿ ಮಾಡಿದರು. ಈ ಸಂಬಂಧ ಸಚಿವ ಖಂಡ್ರೆ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಭೇಟಿ ಬಳಿಕ ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಗೋವಾ ಸಚಿವ ರಾಣೆ, ಗೋವಾದಲ್ಲಿ ಆನೆಗಳು ಪ್ರವೇಶ ಮಾಡಿವೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಎಂಒಯು ಬಗ್ಗೆ ಪರಸ್ಪರ ಚರ್ಚೆಯಾಗಿದೆ ಎಂದರು. ಇದೇ ವೇಳೆ ಮಹದಾಯಿ ಯೋಜನೆಗೆ ಒಪ್ಪಿಗೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಮಹಾರಾಷ್ಟ್ರ ಸಿಎಂ ಜೊತೆ ಸಭೆ ಮಾಡಲು ಕ್ರಮ ವಹಿಸಲಾಗುವುದು. ಕ್ರಮವಹಿಸುವ ಬಗ್ಗೆ ಅವರ ಮನವೊಲಿಸ್ತೇವೆ. ಕರ್ನಾಟಕ ರಾಜ್ಯದ ಸಹಕಾರಕ್ಕೆ ಧನ್ಯವಾದಗಳು ಎಂದರು. ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಎಲ್ಲಾ ಕಡೆಗಳಲ್ಲಿ ವನ್ಯಜೀವಿಗಳ ಸಮಸ್ಯೆ ಇದೆ. ಸಮಸ್ಯೆ ಬಗೆಹರಿಸಲು ಒಡಂಬಡಿಕೆ ಮಾಡಿಕೊಳ್ತೇವೆ. ಮಹದಾಯಿ ವಿಚಾರದ ಬಗ್ಗೆ ಚರ್ಚೆ ಮಾಡ್ತೇವೆ. ಗೋವಾ, ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಬೇಕು. ಕಳಸಾ ಬಂಡೂರಿ ಯೋಜನೆಗೆ ಸಹಕರಿಸುವಂತೆ ಚರ್ಚೆ ನಡೆದಿದೆ. ಅಲ್ಲಿನ ಕ್ಯಾಬಿನೆಟ್ನಲ್ಲಿ ಚರ್ಚಿಸುವಂತೆ ಹೇಳಿದ್ದೇನೆ. ಅವರ ಸಿಎಂ ಜೊತೆ ಮಾತನಾಡಲು ಹೇಳಿದ್ದೇನೆ. ಎರಡು ರಾಜ್ಯಗಳ ಬಾಂಧವ್ಯ ವೃದ್ಧಿಯಾಗಬೇಕು ಎಂದರು.
ವಿಕಾಸಸೌಧದಲ್ಲಿ ಗೋವಾ ಅರಣ್ಯ ಸಚಿವರಾದ ವಿಶ್ವಜಿತ್ ರಾಣೆ ಹಾಗೂ ಅವರ ನಿಯೋಗ ನನ್ನನ್ನು ಭೇಟಿಯಾಗಿ, ಗೋವಾದಲ್ಲಿ ಕೃಷಿಗೆ ಹಾನಿ ಮಾಡುತ್ತಿರುವ ''ಓಂಕಾರ'' ಎಂಬ ಪುಂಡಾನೆಯನ್ನು ಸೆರೆ ಹಿಡಿಯಲು ಕರ್ನಾಟಕದ ಸಹಕಾರವನ್ನು ಕೋರಿದರು. ಕರ್ನಾಟಕ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಚರಣೆಯಲ್ಲಿ ಪರಿಣತಿಯನ್ನು ಹೊಂದಿದ್ದು, ದಸರಾ ಮಹೋತ್ಸವದ ಬಳಿಕ ನಮ್ಮ ತಜ್ಞರು ಮತ್ತು ತಂಡ ಗೋವಾಕ್ಕೆ ತೆರಳಿ ಕಾರ್ಯಾಚರಣೆ ನಡೆಸುವ ಬಗ್ಗೆ ಭರವಸೆ ನೀಡಿದ್ದೇನೆ. ಆದರೆ, ಕುಮ್ಕಿ ಆನೆಗಳನ್ನು ನೀಡುವುದಿಲ್ಲವೆಂಬುದನ್ನು ಸ್ಪಷ್ಟಪಡಿಸಿದೆನು. ಇದೇ ಸಂದರ್ಭದಲ್ಲಿ, ಕಳಸಾ-ಬಂಡೂರಿ ಯೋಜನೆಗೆ ಗೋವಾ ಸರ್ಕಾರ ಸಹಕರಿಸಬೇಕೆಂದು ವಿನಂತಿಸಿದೆನು. ಅಭಿವೃದ್ಧಿ ಹಾಗೂ ಮೂಲಸೌಕರ್ಯ ವಿಚಾರದಲ್ಲಿ ನೆರೆಯ ರಾಜ್ಯಗಳು ಪರಸ್ಪರ ಔದಾರ್ಯದಿಂದ ಇರಬೇಕು ಎಂಬ ಅಭಿಪ್ರಾಯವನ್ನು ಹಂಚಿಕೊಂಡೆನು. ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಉತ್ತಮ ಸಹಕಾರ ಮತ್ತು ಬಾಂಧವ್ಯವನ್ನು ವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಈಶ್ವರ್ ಬಿ ಖಂಡ್ರೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ.