image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೈಸೂರು ದಸರಾ ಭದ್ರತೆಗೆ 6000ಕ್ಕೂ ಹೆಚ್ಚು ಪೊಲೀಸರು, 30 ಸಾವಿರಕ್ಕೂ ಅಧಿಕ ಸಿಸಿಟಿವಿ

ಮೈಸೂರು ದಸರಾ ಭದ್ರತೆಗೆ 6000ಕ್ಕೂ ಹೆಚ್ಚು ಪೊಲೀಸರು, 30 ಸಾವಿರಕ್ಕೂ ಅಧಿಕ ಸಿಸಿಟಿವಿ

ಮೈಸೂರು: ಈ ಬಾರಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಎರಡು ಹಂತದ ಭದ್ರತೆ ಮಾಡಿಕೊಳ್ಳಲಾಗಿದೆ. ಸೆ.22 ರಿಂದ 29ನೇ ತಾರೀಕಿನವರೆಗೆ ಮೊದಲ ಹಂತದ ಭದ್ರತೆ ಮತ್ತು ಸೆ.30 ರಿಂದ ಅ.2ರವರೆಗೆ ಎರಡನೇ ಹಂತದ ಜಂಬೂಸವಾರಿ ಭದ್ರತೆ ಏರ್ಪಡಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದರು.

ಖಾಸಗಿ ಹೋಟೆಲ್​​ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ದಸರಾದ ಜಂಬೂಸವಾರಿ ಮೆರವಣಿಗೆ ಹಾಗೂ ಸುರಕ್ಷತೆ, ಸುಗಮ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಯ ಸಿದ್ಧತೆ ಹಾಗೂ ಜಂಬೂಸವಾರಿ ಮೆರವಣಿಗೆಯ ಭದ್ರತೆ ಬಗ್ಗೆ ಪೊಲೀಸ್ ಅಯುಕ್ತರು ಮಾಹಿತಿ ನೀಡಿದರು. ಈ ಬಾರಿ ಸೆ.22 ರಿಂದ ಅ.2ರವರೆಗೆ ದಸರಾ ಮಹೋತ್ಸವ ಜರುಗಲಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಕಡೆ ಹಲವಾರು ಕಾರ್ಯಕ್ರಮಗಳು ಜರುಗಲಿವೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರ ಕಲ್ಪಿಸಲು ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಮಾಹಿತಿ ನೀಡಿದರು. ಸೆ.22ರಿಂದ 29ರವರೆಗೆ ಮೊದಲ ಹಂತದ ಭದ್ರತೆ ಕೈಗೊಳ್ಳಲಾಗಿದೆ. ಇದರಲ್ಲಿ ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ದಸರಾ ವಸ್ತು ಪ್ರದರ್ಶನ, ದಸರಾ ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ, ದೀಪಾಲಂಕಾರ, ಯುವ ದಸರಾ, ಏರ್ ಶೋ ನಡೆಯಲಿದೆ. ಜೊತೆಗೆ ಎರಡನೇ ಹಂತದ ಭದ್ರತೆಯಲ್ಲಿ ಜಂಬೂಸವಾರಿ ಮೆರವಣಿಗೆ, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ. ಸೆ.30 ರಿಂದ ಅ.2ರವರೆಗಿನ ಎರಡನೇ ಹಂತದ ಭದ್ರತೆಗಾಗಿ ಬೇರೆ ಕಡೆಯಿಂದ ಪೊಲೀಸ್ ಅಧಿಕಾರಿಗಳನ್ನು ಕರೆಸಲಾಗಿದೆ ಎಂದರು. ಈ ಬಾರಿ ಎರಡು ಹಂತದ ದಸರಾ ಭದ್ರತೆಗೆ 5 ಎಸ್ಪಿಗಳು, 35 ಡಿವೈಎಸ್ಪಿಗಳು, 35 ಕೆಎಸ್​​ಆರ್​​ಪಿ ತುಕಡಿಗಳು, 15 ಕಾರ್ ಬಾರ್ ಡಿಎಆರ್ ತುಕಡಿ, 29 ಎಎಸ್​​ಸಿ ಟೀಮ್, 1 ಗರುಡ ಟೀಮ್, ಒಂದು ಎಆರ್​​ಎಫ್ ತಂಡ, 1,200 ಹೋಂ ಗಾರ್ಡ್ಸ್ ಸೇರಿ 6,384 ಮಂದಿ ಪೊಲೀಸ್ ಸಿಬ್ಬಂದಿಯನ್ನು ದಸರಾ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದರು.

ಮೈಸೂರು ನಗರದ ಇತರ ಕಡೆ ನಡೆಯುವ ಕಾರ್ಯಕ್ರಮಗಳಲ್ಲಿ ಡ್ರೋನ್ ಕ್ಯಾಮರಾ ಅಳವಡಿಕೆ, ನಗರದ ಲಾಡ್ಜ್​ಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ, ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ವಿಶೇಷ ಭದ್ರತೆ, ನಗರದ ವಿವಿಧ ಕಡೆ 30,614 ಸಿಸಿಟಿವಿ ಕ್ಯಾಮರಾ ಅಳವಡಿಕೆ ಸೇರಿದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ವಿವರಿಸಿದರು. ದಸರಾ ಸಂಬಂಧಿಸಿದ ಸುದ್ದಿಗಳನ್ನು ತಪ್ಪಾಗಿ ಪ್ರಕಟಿಸಿ ಜನರಲ್ಲಿ ಗಾಬರಿ ಹುಟ್ಟಿಸುವ ವಿಡಿಯೋಗಳ ಸೋಷಿಯಲ್ ಮೀಡಿಯಾದಲ್ಲಿ ಹಾಕಿದರೆ ಹಾಗೂ ಸುಳ್ಳು ಸುದ್ದಿಗಳನ್ನು ಹರಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೀಮಾ ಲಾಟ್ಕರ್ ಎಚ್ಚರಿಕೆ ನೀಡಿದರು. ದಸರಾ ಸಂದರ್ಭದಲ್ಲಿ ಮೈಸೂರು ನಗರದ ಅರಮನೆ ಸುತ್ತ ಹಾಗೂ ನಗರದ ಇತರ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಹೊರಗಿನಿಂದ ಬರುವ ವಾಹನ ಸಂಚಾರರು ಬದಲಿ ಮಾರ್ಗವನ್ನು ಬಳಸುವಂತೆ ತಿಳಿಸಲಾಗಿದೆ. ಈ ಬಗ್ಗೆ ಸಂಚಾರಿ ಪೊಲೀಸರು ಮಾಹಿತಿ ನೀಡಲಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ