ಕಲಬುರಗಿ : ಕನ್ನಡ ಭಾಷೆಗೆ ಅವಮಾನ ಮಾಡಿರುವುದನ್ನ ಖಂಡಿಸಿ ಕರವೇ ಕಾರ್ಯಕರ್ತರು ಅಧಿಕಾರಿಗಳ ಮುಖಕ್ಕೆ ಮಸಿ ಬಳಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಎಂ.ಎಸ್.ಕೆ. ಮಿಲ್ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ನೂತನ ತರಕಾರಿ ಮಾರುಕಟ್ಟೆ ಕಟ್ಟಡದ ಕನ್ನಡ ನಾಮಫಲಕವನ್ನು ತೆರವುಗೊಳಿಸಿ ಉರ್ದು ನಾಮಫಲಕ ಹಾಕಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಎಸ್. ಮಾಳಗಿ ಮತ್ತು PWD ಮುಖ್ಯ ಎಂಜಿನಿಯರ್ ಅಮಿನ್ ಮುಕ್ತಾರ್ ಅವರ ಮುಖಕ್ಕೆ ಕರವೇ ಕಾರ್ಯಕರ್ತರು ಮಸಿ ಬಳಿದ ಘಟನೆ ನಡೆಯಿತು. ನಾರಾಯಣ ಗೌಡ ಬಣದ ಕರವೇ ಕಾರ್ಯಕರ್ತರು, ಕನ್ನಡ ಭಾಷೆಗೆ ಅವಮಾನ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕನ್ನಡ ನಾಮಫಲಕವನ್ನು ತೆರವುಗೊಳಿಸಿ ಉರ್ದು ಫಲಕ ಹಾಕಿರುವುದು ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ. ಕೂಡಲೇ ಕನ್ನಡ ನಾಮಫಲಕವನ್ನು ಮರಳಿ ಅಳವಡಿಸಬೇಕು," ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಯ್ತು. ಕನ್ನಡ ನಾಮಫಲಕವನ್ನು ಮರಳಿ ಅಳವಡಿಸುವವರೆಗೆ ಪ್ರತಿಭಟನೆ ಮುಂದುವರಿಯುವುದಾಗಿ ಕರವೇ ಎಚ್ಚರಿಕೆ ನೀಡಿದೆ.