ಬೆಂಗಳೂರು: ಕೆಂಪೇಗೌಡರು ಕಟ್ಟಿದ ಈ ಬೆಂಗಳೂರಿನಲ್ಲಿ ನೂತನವಾಗಿ ನಗರ ವಿನ್ಯಾಸ (town planning) ಕಾಲೇಜು ಪ್ರಾರಂಭ ಮಾಡಬೇಕು ಎನ್ನುವ ಆಲೋಚನೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ದಿ ಇನ್ಸಿಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ವತಿಯಿಂದ ನಡೆದ 58ನೇ ಅಭಿಯಂತರ ದಿನ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ 165ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದರು. ಆದರೆ, ಆನಂತರ ಈ ನಗರ ವ್ಯವಸ್ಥಿತವಾಗಿ ಬೆಳೆದಿಲ್ಲ. ಇದಕ್ಕೆ ಒಂದು ವ್ಯವಸ್ಥಿತ ರೂಪ ನೀಡಬೇಕಿದೆ. ಇತರೇ ಇಂಜಿನಿಯರಿಂಗ್ ವಿಷಯಗಳನ್ನು ಅಭ್ಯಾಸ ಮಾಡಿ ಇತರೇ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರು ಎರವಲು ಸೇವೆ ಪಡೆದು ನಗರ ವಿನ್ಯಾಸ ವಿಭಾಗಕ್ಕೆ ಬರುತ್ತಿದ್ದಾರೆ ಎಂದರು. ಈ ನಗರದ ರಸ್ತೆ, ನೀರು, ಮೂಲಸೌಕರ್ಯ ವ್ಯವಸ್ಥೆ ಮಾಡುವವರು ಇಂಜಿನಿಯರ್ಗಳು. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. 70 ಲಕ್ಷ ಜನರು ಪ್ರತಿದಿನ ಹೊರಗಿನಿಂದ ಬಂದು ಹೋಗುತ್ತಾರೆ. 1.40 ಕೋಟಿ ಜನ ವಾಸವಾಗಿದ್ದಾರೆ. ಇದನ್ನು ಬೆಂಗಳೂರು ತಡೆದುಕೊಳ್ಳಬೇಕಿದೆ. ಇದಕ್ಕೆಲ್ಲಾ ಪರಿಹಾರವಾಗಿ ನನ್ನ ಕಾಲದಲ್ಲಿ ಒಂದಷ್ಟು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕಿದೆ. ಅದಕ್ಕಾಗಿ ಟನಲ್ ರಸ್ತೆ ಮಾಡಲಾಗುತ್ತಿದೆ. ಇದಕ್ಕೂ ಟೀಕೆ ಮಾಡಿ ಹಣ ಹೊಡೆಯಲು ಮಾಡುತ್ತಿದ್ದಾರೆ ಎಂದರು. ಆದರೂ ನಾನು ನನ್ನ ಕೆಲಸ ಮುಂದುವರಿಸಿದ್ದೇನೆ. ಬೆಂಗಳೂರು ಬಿಜಿನೆಸ್ ಕಾರಿಡಾರ್ ಅನ್ನು ಡಿನೋಟಿಫಿಕೆಷನ್ ಮಾಡಬೇಕು ಎಂದು ಒತ್ತಡ ಬಂದಿತು. ಆದರೂ ನಾನು ಮಣಿಯಲಿಲ್ಲ. 100 ಕಿ.ಮೀ ಉದ್ದದ ರಸ್ತೆ ನಿರ್ಮಾಣವಾಗುತ್ತಿದೆ ಎಂದರು.
ನಾನು ಇಂಜಿನಿಯರ್ ಆಗಲಿಲ್ಲ ಆದರೆ, ನನ್ನ ಮಕ್ಕಳನ್ನು ಇಂಜಿನಿಯರ್ ಓದಿಸಿದ್ದೇನೆ. ಎಂಜಿನಿಯರಿಂಗ್ ಕಾಲೇಜು ಪ್ರಾರಂಭ ಮಾಡಿದ್ದೇನೆ. ನಮ್ಮ ಸಂಸ್ಥೆಯಿಂದ ನೂರಾರು ಜನ ಇಂಜಿನಿಯರ್ಗಳು ಹೊರ ಬರುತ್ತಿದ್ದಾರೆ. ನಾನು ಸಚಿವನಾಗಿ ಜಿಬಿಎ ಹಾಗೂ ನೀರಾವರಿ ಇಲಾಖೆಯಲ್ಲಿರುವ ಇಂಜಿನಿಯರ್ಗಳ ಜೊತೆ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ನಗರಾಭಿವೃದ್ಧಿ ಹಾಗೂ ಇಂಧನ ಸಚಿವನಾಗಿದ್ದಾಗಲೂ ಕೆಲಸ ಮಾಡಿದ್ದೆ. ಇಂಜಿನಿಯರ್ಗಳು ದೇಶ ನಿರ್ಮಿಸುವವರು. ಇಡೀ ಸಮಾಜ ನಿಮ್ಮ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದರ ಬಗ್ಗೆ ನನಗೆ ಅರಿವಿದೆ ಎಂದು ಹೇಳಿದರು. ಈ ಹಿಂದೆ ಇನಾಂದಾರ್ ಎಂಬುವರು ಐಟಿಬಿಟಿ ಸಚಿವರಾಗಿದ್ದರು. ಆಗ ಪೊಲೆಂಡ್ ಪ್ರಧಾನಿ ಅವರು ಭೇಟಿ ನೀಡಿದ್ದ ವೇಳೆ ರಾಜ್ಯಪಾಲರ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ನಾನೂ ಸಹ ಭಾಗವಹಿಸಿದ್ದೆ. ಆಗ ಅವರನ್ನು ಬೆಂಗಳೂರು ಭೇಟಿ ವಿಚಾರ ಕೇಳಿದಾಗ, 'ಸಿಲಿಕಾನ್ ವ್ಯಾಲಿ'ಗೆ ನಮ್ಮ ತಂಡವನ್ನು ಕಳಿಸಿದ್ದೆ. ನಮ್ಮ ತಂಡ ಅಲ್ಲಿ ಪರಿಶೀಲನೆ ಮಾಡಿದಾಗ ಐದರಲ್ಲಿ ಮೂರು ಜನ ಭಾರತದವರು. ಅದರಲ್ಲಿ ಇಬ್ಬರು ಬೆಂಗಳೂರಿನವರೇ ಇದ್ದಾರೆ ಎನ್ನುವುದು ಕೇಳಿ ಆಶ್ಚರ್ಯವಾಯಿತು. ಆದ ಕಾರಣ ನಾನು ನೇರವಾಗಿ ಇಲ್ಲಿಯೇ ವಹಿವಾಟು ನಡೆಸಲು ಬಂದೆ ಎಂದರು. ಇದು ನಮ್ಮ ಕರ್ನಾಟಕದ ಹೆಗ್ಗಳಿಕೆ. ಅಟಲ್ ಬಿಹಾರಿ ವಾಜಪೇಯಿ ಅವರು ಮುಂದಿನ ದಿನಗಳಲ್ಲಿ ಬೆಂಗಳೂರಿನ ಮೂಲಕ ಭಾರತ ನೋಡಲಾಗುತ್ತದೆ ಎಂದಿದ್ದರು ಎಂದರು. ನಮ್ಮ ರಾಜ್ಯದಲ್ಲಿ ಅಧಿಕೃತವಾಗಿ 300 ಇಂಜಿನಿಯರಿಂಗ್ ಕಾಲೇಜುಗಳಿವೆ. ಪ್ರತಿವರ್ಷ 1 ಲಕ್ಷ ಇಂಜಿನಿಯರ್ಗಳು ಹೊರಬರುತ್ತಿದ್ದಾರೆ. ಪ್ರಪಂಚದ ಯಾವುದೇ ಮೂಲೆಗೆ ಹೋದರು ನಮ್ಮ ಕರ್ನಾಟಕದವರು ಸಿಗುತ್ತಾರೆ. ಅತ್ಯಂತ ಪ್ರತಿಭಾವಂತರು ವಿದೇಶಗಳಲ್ಲಿ ನೆಲಿಸಿ ಸೇವೆ ಮಾಡುತ್ತಿದ್ದಾರೆ. ಸಜ್ಜನ್ ಜಿಂದಾಲ್ ಅವರು ಓದಿದ್ದು ಸಹ ಇದೇ ಬೆಂಗಳೂರಿನಲ್ಲಿ. ಅಂದರೆ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳು ನಮ್ಮಲ್ಲಿವೆ. ವಿದ್ಯಾರ್ಥಿಗಳು ಇಂತಹ ಜ್ಞಾನದ ಆಗರದಲ್ಲಿ ಅತ್ಯುತ್ತಮ ಅಂಶಗಳನ್ನು ಪಡೆದುಕೊಳ್ಳಬೇಕು ಎಂದರು.