ಬೆಂಗಳೂರು: ಪತ್ರ ಸಮರಕ್ಕೆ ವಿರಾಮ ಹಾಡಲು ಬಯಸಿರುವ ಸ್ಪೀಕರ್ ಖಾದರ್ ಸಭಾಪತಿ ಬಸವರಾಜ ಹೊರಟ್ಟಿ ಮನೆಗೆ ಭೇಟಿ ನೀಡಿ ಪರಸ್ಪರ ಮಾತುಕತೆ ಮೂಲಕ ಗೊಂದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಪತ್ರದ ಮೂಲಕ ಸ್ಪೀಕರ್ ವಿರುದ್ಧ ಅಸಮಾಧಾನ ಹೊರಹಾಕಿದ್ದ ಹೊರಟ್ಟಿ, ತಮ್ಮೊಂದಿಗೆ ಸಂವಹನ ನಡೆಸದೆ ಏಕಪಕ್ಷೀಯವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ದೂರಿದ್ದರು. ಸ್ಪೀಕರ್‌ಗೆ ದೂರವಾಣಿ ಕರೆ ಮಾಡಿದ್ದ ಸಭಾಪತಿ, ಪತ್ರದ ಕುರಿತು ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದರು. ಖುದ್ದು ಭೇಟಿಯಾಗುವುದಾಗಿ ತಿಳಿಸಿದ ಸ್ಪೀಕರ್, ಸಭಾಪತಿ ನಿವಾಸಕ್ಕೆ ತೆರಳಿ ಸ್ವಲ್ಪ ಹೊತ್ತು ಚರ್ಚಿಸಿದರು.
ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಉಭಯ ಸದನಗಳ ಮುಖ್ಯಸ್ಥರು, ತಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ. ಕೆಲವು ಅಧಿಕಾರಿಗಳಿಂದ ಸಂವಹನದ ಕೊರತೆ ಆಗಿತ್ತು. ಎಲ್ಲವೂ ಬಗೆಹರಿದಿದೆ ಎನ್ನುವ ಮೂಲಕ ಗೊಂದಲಗಳಿಗೆ ತೆರೆ ಎಳೆದರು. ರಾಜಕೀಯ ಕ್ಷೇತ್ರ, ಅನುಭವ ಎಲ್ಲದರಲ್ಲೂ ಬಸವರಾಜ ಹೊರಟ್ಟಿ ಹಿರಿಯರು. ಒಟ್ಟೊಟ್ಟಿಗೆ ಕೆಲಸ ಮಾಡುವಾಗ ಕೆಲವು ವಿಷಯಗಳು ಇದ್ದು, ಅದರ ಬಗ್ಗೆ ಚರ್ಚೆ ಮಾಡಿಕೊಂಡಿದ್ದೇವೆ. ಇದೊಂದು ಸೌಜನ್ಯದ ಭೇಟಿ. ಹಿಂದೆಯೂ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ಇಡೀ ವಿಧಾನಮಂಡಲ, ರಾಜ್ಯದ ಘನತೆ-ಗೌರವ ಹೆಚ್ಚಿಸುವ ಕೆಲಸವನ್ನು ಇಬ್ಬರೂ ಸೇರಿ ಮಾಡುತ್ತೇವೆ. ಆಗಾಗ ಪ್ರೀತಿಯ ಪತ್ರ ಬರೆದುಕೊಳ್ಳುತ್ತಿರುತ್ತೇವೆ ಎಂದರು.