ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ-2025ರ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾಗಿರುವ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ನಿಗದಿಪಡಿಸಲು ಹೈಕೋರ್ಟ್ ಇಂದು ನಿರಾಕರಿಸಿತು. ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿದಾರರ ಪರ ವಕೀಲರು, ಬೆಳಗ್ಗೆ ನ್ಯಾಯಾಲಯದ ಕಲಾಪ ಪ್ರಾರಂಭವಾಗುತ್ತಿದ್ದಂತೆ, ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ನ್ಯಾಯಪೀಠಕ್ಕೆ ಮೆಮೋ ಸಲ್ಲಿಸಿ, ತುರ್ತು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪೀಠ, ಅರ್ಜಿಯನ್ನು ಯಾವಾಗ ಸಲ್ಲಿಸಲಾಗಿದೆ? ಎಂದು ಪ್ರಶ್ನಿಸಿತು. ಇದಕ್ಕೆ ವಕೀಲರು ನಿನ್ನೆಯಷ್ಟೇ ಸಲ್ಲಿಸಿದ್ದೇವೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಇದೇ 22ರಂದು ದಸರಾ ಮಹೋತ್ಸವ ನಡೆಯಲಿದೆ. ಹೀಗಾಗಿ, ತುರ್ತು ವಿಚಾರಣೆಗೆ ನಿಗದಿ ಮಾಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ತುರ್ತು ವಿಚಾರಣೆಗೆ ನಿಗದಿಪಡಿಸಬೇಕಾದ ಅಗತ್ಯವಿಲ್ಲ, ಸಾಮಾನ್ಯದಂತೆ ಅರ್ಜಿ ಸಲ್ಲಿಕೆಯಾದ ನಾಲ್ಕು ದಿನಗಳಲ್ಲಿ ವಿಚಾರಣೆಗೆ ನಿಗದಿಯಾಗಲಿದೆ ಎಂದು ತಿಳಿಸಿ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು. ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮ ಆಕ್ಷೇಪಿಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಲ್ಲಿಕೆಯಾದ ಎರಡು ದಿನಗಳ ಬಳಿಕ ಬೆಂಗಳೂರಿನ ಹೆಚ್.ಎಸ್.ಗೌರವ್, ಉದ್ಯಮಿ ಟಿ.ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್.ಸೌಮ್ಯ ಅವರು ಪ್ರತ್ಯೇಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಹಿಂದೂ ಧರ್ಮಕ್ಕೆ ಸೇರದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರ ಹಿಂಪಡೆಯಬೇಕು. ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಹಿಂದೂ ಆಗಮಿಕ ಪದ್ದತಿ ಪ್ರಕಾರವೇ ದಸರಾ ಉದ್ಘಾಟನೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ದಸರಾ ಉದ್ಘಾಟನೆಯ ಹಿಂದೂ ಧಾರ್ಮಿಕ ಸಂಪ್ರದಾಯದ ಅವಿಭಾಜ್ಯ ಭಾಗವೆಂದು ಘೋಷಿಸಬೇಕು. ಹಿಂದೂ ಗಣ್ಯರಿಂದಲೇ ದಸರಾ ಉದ್ಘಾಟನೆ ಮಾಡಿಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಪ್ರತಾಪ ಸಿಂಹ ಸಲ್ಲಿಸಿದ್ದ ಅರ್ಜಿಯಲ್ಲಿ, ಮೈಸೂರು ಸಂಸ್ಥಾನವನ್ನು ಮಹಿಷಾಸುರ ಎಂಬ ರಾಕ್ಷಸ ಆಳ್ವಿಕೆ ಮಾಡುತ್ತಿದ್ದು, ಅವರ ದಬ್ಬಾಳಿಕೆ ತಡೆಯಲು ಶಿವನ ಪತ್ನಿ ಪಾರ್ವತಿ ದೇವಿ ಚಾಮುಂಡೇಶ್ವರಿಯಾಗಿ ಅವತರಿಸಿ, ಚಾಮುಂಡಿ ಬೆಟ್ಟದಲ್ಲಿ ರಾಕ್ಷಸನ ಸಂಹಾರ ಮಾಡಿದ್ದರು. ಅಂದಿನಿಂದ ಈ ನಗರಕ್ಕೆ ಮಹಿಷೂರು ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಬಳಿಕ ಆಡಳಿತ ನಡೆಸಿದ್ದ ಬ್ರಿಟೀಷರು ಮೈಸೂರು ಎಂಬುದಾಗಿ ಮರು ನಾಮಕರಣಗೊಳಿಸಿದ್ದರು ಎಂದು ವಿವರಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿಯನ್ನು ನಾಡದೇವಿ ಎಂಬುದಾಗಿ ಸಂಬೋಧಿಸುತ್ತಿದ್ದು, ಹಿಂದೂ ಧರ್ಮೀಯರ ಪವಿತ್ರಸ್ಥಳ ಎಂಬುದಾಗಿ ಪೂಜಿಸಲಾಗುತ್ತಿದೆ. ಮೈಸೂರು ದಸರಾ ಹಬ್ಬವನ್ನು ನಾಡ ಹಬ್ಬ ಎಂಬುದಾಗಿ ಕರೆಯಲಾಗುತ್ತಿದೆ. ಆದರೆ, 2025ರ ಆಗಸ್ಟ್ 23ರಂದು ರಾಜ್ಯ ಸರ್ಕಾರ ಬಾನು ಮುಷ್ತಾಕ್ ಅವರನ್ನು ದಸರಾ ಹಬ್ಬದ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನ ನೀಡಿದೆ. ಬಾನು ಮುಷ್ತಾಕ್ ಅವರು ಬೇರೊಂದು ಧರ್ಮಕ್ಕೆ ಸೇರಿದವರಾಗಿದ್ದಾರೆ. ಹಿಂದೂ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಧರ್ಮದ ಆಚರಣೆ ಎಂಬುದು ಸಂವಿಧಾನಬದ್ಧ ಹಕ್ಕಾಗಿದ್ಧು, ಧಾರ್ಮಿಕ ಸಂಪ್ರದಾಯಗಳು ಮುಂದುವರೆಯಬೇಕು. ಹೀಗಾಗಿ, ರಾಜ್ಯ ಸರ್ಕಾರ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಸಂವಿಧಾನದ ಪರಿಚ್ಛೇದ 25 ಮತ್ತು 26ರಲ್ಲಿ ಲಭ್ಯವಾಗಿರುವ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಉಲ್ಲಂಘನೆಯಾದಂತಾಗಿದೆ ಎಂದಿದ್ದಾರೆ. ದಸರಾ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಇದಕ್ಕೆ ರಾಜ ಮನೆತನದವರು ಸೇರಿದಂತೆ ಇತರರೊಂದಿಗೆ ಸಮಾಲೋಚನೆ ಮಾಡದೇ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ತಡೆ ನೀಡಬೇಕು. ಸರ್ಕಾರದ ಈ ಕ್ರಮದಿಂದ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳಿಗೆ ಕಾರಣವಾಗಿದೆ. ಅಲ್ಲದೆ, ಶಾಂತಿ ಉಲ್ಲಂಘನೆ ಮತ್ತು ಕೋಮು ಗಲಭೆಗೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದ್ದು, ಅದನ್ನು ತಡೆಯಬೇಕಾಗಿದೆ. ಹೀಗಾಗಿ, ಸರ್ಕಾರದ ಕ್ರಮಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಪ್ರತಾಪ್ ಸಿಂಹ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.