image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸೆಣಬಿನ ಚೀಲಗಳ ಬಳಕೆ; ಕೇಂದ್ರದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್

ಸೆಣಬಿನ ಚೀಲಗಳ ಬಳಕೆ; ಕೇಂದ್ರದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಸೆಣಬಿನ ಕಚ್ಚಾ ಪದಾರ್ಥಗಳಿಂದ ಸಿದ್ದಪಡಿಸಿರುವ ಚೀಲಗಳಿಂದ ಪ್ಯಾಕಿಂಗ್‌ ಮಾಡಲು ಅವಕಾಶ ಮಾಡಿಕೊಟ್ಟಿರುವ ಸೆಣಬಿನ ಪ್ಯಾಕೇಜಿಂಗ್‌ ಸಾಮಗ್ರಿಗಳ (ಪ್ಯಾಕಿಂಗ್‌ ಸರಕುಗಳಲ್ಲಿ ಕಡ್ಡಾಯ ಬಳಕೆ) ಕಾಯ್ದೆ ಅಡಿಯಲ್ಲಿ ಹೊರಡಿಸಿರುವ ಅಧಿಸೂಚನೆ ಎತ್ತಿಹಿಡಿದಿರುವ ಹೈಕೋರ್ಟ್‌, ಅಧಿಸೂಚನೆ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಸಕ್ಕರೆ ಪ್ಯಾಕಿಂಗ್‌ನಲ್ಲಿ ಸೆಣಬಿನ ಚೀಲಗಳ ಬಳಕೆ ಸಂಬಂಧ ಕಾಯ್ದೆ ಕುರಿತು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗಳನ್ನು ಪ್ರಶ್ನಿಸಿ ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ ಮತ್ತು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಸುಪ್ರೀಂಕೋರ್ಟ್‌ನ ಆದೇಶಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಕಚ್ಚಾ ಸೆಣಬಿನ ಬೆಳಗಾರರು ಮತ್ತು ಕಾರ್ಮಿಕರಿಗೆ ಸಾಮಾಜಿಕ - ಆರ್ಥಿಕ ನ್ಯಾಯ ಒದಗಿಸುವ ಉದ್ದೇಶದಿಂದ ಈ ನೀತಿಯನ್ನು ಜಾರಿ ಮಾಡಲಾಗಿದೆ. ಇದು ರಾಜ್ಯ ನೀತಿ ನಿರ್ದೇಶನ ತತ್ವಗಳ ಅಡಿಯಲ್ಲಿ ಸಂವಿಧಾನ ಒದಗಿಸಿರುವ ಒಂದು ಸೌಲಭ್ಯವಾಗಿದೆ. ಶೇ.100ರಷ್ಟು ಸಕ್ಕರೆಯನ್ನು ಸೆಣಬಿನ ಚೀಲಗಳಿಂದ ಬಳಕೆ ಕ್ರಮವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿತ್ತು. ಇದೀಗ ಶೇ.20ರಷ್ಟು ಬಳಸಬೇಕು ಎಂಬ ಅಧಿಸೂಚನೆಯನ್ನು ಪ್ರಶ್ನಿಸುವುದನ್ನು ಪರಿಗಣಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ. ಆದ್ದರಿಂದ ಕೇಂದ್ರ ಸರ್ಕಾರದ ಆದೇಶದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು. ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಶೇ.20ರಷ್ಟನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡಬೇಕು ಎಂದು ಕೇಂದ್ರ ಜವಳಿ ಸಚಿವಾಲಯ 2023ರ ಡಿ.26 ಹಾಗೂ 2024ರ ಜೂ.28ರಂದು ಅಧಿಸೂಚನೆ ಹೊರಡಿಸಿತ್ತು. 2014ರ ರಂಗರಾಜನ್ ಸಮಿತಿಯ ಶಿಫಾರಸು, ಆರ್ಥಿಕ ಸಚಿವಾಲಯ, ಆಹಾರ ಸಚಿವಾಲಯ, ರಾಸಾಯನಿಕ ರಸಗೊಬ್ಬರ ಸಚಿವಾಲಯ, ಭಾರತೀಯ ಸ್ಪರ್ಧಾ ಆಯೋಗದ ಶಿಫಾರಸ್ಸಿನಂತೆ ಸಕ್ಕರೆಯನ್ನು ಸೆಣಬಿನ ಪ್ಯಾಕೇಜಿಂಗ್ ವಸ್ತುಗಳ (ಸರಕುಗಳಲ್ಲಿ ಕಡ್ಡಾಯ ಬಳಕೆ) ಕಾಯ್ದೆ-1987ರ (ಜೆಪಿಎಂಎ) ವ್ಯಾಪ್ತಿಯಿಂದ ಹೊರಗಿಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಕೇಂದ್ರ ಸರ್ಕಾರದ ಅಧಿಸೂಚನೆಯು ಸೆಣಬಿನ ಉದ್ದಮವನ್ನು ಉತ್ತೇಜಿಸುವ ಗುರಿ ಹೊಂದಿದೆ. ಆದರೆ, ಈ ಚೀಲಗಳು ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಸಕ್ಕರೆಯನ್ನು ಈ ಕಾಯ್ದೆಯಿಂದ ಹೊರಗಿಡಬೇಕು. ಸೆಣಬಿನ ಚೀಲಗಳಲ್ಲಿ ಸಕ್ಕರೆಯ ಪ್ಯಾಕೇಜಿಂಗ್​ಗೆ 2022ರ ಜುಲೈ 21ರಂದು ನಡೆದ ಸ್ಥಾಯಿ ಸಲಹಾ ಸಮಿತಿಯ ಸಭೆಯಲ್ಲಿ ವಿನಾಯಿತಿ ನೀಡಲಾಗಿದೆ. ಸೆಣಬಿನ ಚೀಲದ ತಯಾರಿಕೆಯಲ್ಲಿ ಬಳಸಲಾಗುವ ಎಣ್ಣೆಯು ಟ್ರೋಮೋಜನಿಕ್ (ಗಡ್ಡೆಜನಕ) ಎಂದು ಕೈಗಾರಿಕಾ ವಿಷಶಾಸ್ತ್ರ ಸಂಶೋಧನಾ ಕೇಂದ್ರ ಅಭಿಪ್ರಾಯಪಟ್ಟಿದೆ. ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದರಿಂದ ಸಕ್ಕರೆಯ ಗುಣಮಟ್ಟ ಹಾಳಾಗುವುದಲ್ಲದೆ, ಅದು ಕಲುಷಿತಗೊಳ್ಳುತ್ತದೆ'' ಎಂದು ವಿವರಿಸಿದರು. ಇದಕ್ಕೆ ಆಕ್ಷೇಪಿಸಿದ್ದ ಕೇಂದ್ರ ಸರ್ಕಾರದ ಪರ ವಕೀಲರು, ''ಸೆಣಬಿನ ಚೀಲಗಳಲ್ಲಿ ಸಕ್ಕರೆ ಪ್ಯಾಕಿಂಗ್ ಮಾಡುವ ಸಂಬಂಧ ಸೆಣಬಿನ ಪ್ಯಾಕೇಜಿಂಗ್ ವಸ್ತುಗಳ (ಸರಕುಗಳಲ್ಲಿ ಕಡ್ಡಾಯ ಬಳಕೆ) ಕಾಯ್ದೆ-1987ರ ಸೆಕ್ಷನ್ 3ರ ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸೆಣಬಿನ ಕಚ್ಚಾ ಪದಾರ್ಥಗಳ ಉತ್ಪನ್ನ ಹಾಗೂ ಸೆಣಬಿನ ಪ್ಯಾಕೇಜಿಂಗ್​ಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. 1 ಕ್ವಿಂಟಾಲ್ ಮೇಲ್ಪಟ್ಟ ಸಗಟು ಪ್ಯಾಕೇಜಿಂಗ್ ಹಾಗೂ ರಫ್ತಿಗೆ ಈ ಮಿತಿ ಅನ್ವಯ ಆಗಲ್ಲ. ಕೇವಲ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ವಿತರಣೆಗಷ್ಟೇ ಇದು ಅನ್ವಯವಾಗಲಿದೆ ಎಂದು ತಿಳಿಸಿದ್ದರು.

Category
ಕರಾವಳಿ ತರಂಗಿಣಿ