image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸ್ವಾತಂತ್ರ್ಯ ಹೋರಾಟಗಾರರ ತಿಂಗಳ ಗೌರವಧನ ₹4.85 ಕೋಟಿಯಷ್ಟು ಬಾಕಿ

ಸ್ವಾತಂತ್ರ್ಯ ಹೋರಾಟಗಾರರ ತಿಂಗಳ ಗೌರವಧನ ₹4.85 ಕೋಟಿಯಷ್ಟು ಬಾಕಿ

ಬೆಂಗಳೂರು: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಪಡೆದುಕೊಳ್ಳಲು ಹೋರಾಡಿ ಜೈಲು ಶಿಕ್ಷೆ ಅನುಭವಿಸಿದ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಗೌರವಧನವನ್ನು ಹಲವು ತಿಂಗಳಿಂದ‌ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರ‌ ಮೊತ್ತವೇ 4.85 ಕೋಟಿ ರೂಪಾಯಿ ದಾಟಿದೆ. ರಾಜ್ಯದಲ್ಲಿ 150 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಮಾಸಿಕ 10 ಸಾವಿರ ರೂಪಾಯಿ ಗೌರವಧನ ಪಡೆಯುತ್ತಿದ್ದಾರೆ. ಮೃತಪಟ್ಟ ಸ್ವಾತಂತ್ರ್ಯ ಯೋಧರ ಶವ ಸಂಸ್ಕಾರಕ್ಕೆ ಸರ್ಕಾರ 4 ಸಾವಿರ ರೂಪಾಯಿ ನೀಡುತ್ತದೆ. ಧಾರವಾಡದಲ್ಲಿ 34, ಬೆಳಗಾವಿಯಲ್ಲಿ 30, ತುಮಕೂರು 15, ಕಲಬುರಗಿಯಲ್ಲಿ 10 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 150 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಗೌರವಧನ ಪಡೆಯುತ್ತಿದ್ದಾರೆ. ಕೆಲ ತಿಂಗಳಿಂದ ಸರ್ಕಾರವು ಮಾಸಾಶನ ನೀಡಿಲ್ಲ. ಇದರಿಂದ 4.85 ಕೋಟಿ ರೂಪಾಯಿ ಗೌರವಧನ ಬಾಕಿ ಉಳಿಸಿಕೊಂಡಿದೆ.

ಕಂದಾಯ ಇಲಾಖೆಯ ಅಧೀನದಲ್ಲಿರುವ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶನಾಲಯ ಕಳೆದ ಎರಡು ವರ್ಷಗಳಿಂದ ಆಧಾರ್ ಆಧಾರಿತವಾಗಿ ನೇರ ಹಣ ಸಂದಾಯ ಮೂಲಕ ಹೋರಾಟಗಾರರಿಗೆ ಪಿಂಚಣಿ ಪಾವತಿಸುತ್ತಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ ಚಾಮರಾಜನಗರ, ಯಾದಗಿರಿ, ಉಡುಪಿ, ಕಲಬುರಗಿ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. 1947ನೇ ಆಗಸ್ಟ್ 15ರ ಮೊದಲು ಅಪರಾಧಿ ಅಥವಾ ಜೈಲುವಾಸ ಅನುಭವಿಸಿದ ವ್ಯಕ್ತಿಗಳು ಸ್ವಾತಂತ್ರ್ಯದ ಕಾರಣಕ್ಕಾಗಿ ವಿಚಾರಣಾಧೀನ ಕೈದಿಯಾಗಿದ್ದರೆ ಹಾಗೂ ರಾಷ್ಟ್ರೀಯ ಚಳವಳಿಗಳಲ್ಲಿ ಭಾಗವಹಿಸಿದ್ದರೆ, ನಾಗರಿಕ ಅಥವಾ ಮಿಲಿಟರಿ ಯುದ್ದಗಳಲ್ಲಿ ವ್ಯಕ್ತಿಗಳು ಸಾವನ್ನಪ್ಪಿದ್ದರೆ ಅವರಿಗೆ ಗೌರವಧನ ಹಾಗೂ ಕುಟುಂಬ ಮಾಸಾಶನವನ್ನು ರಾಜ್ಯ ಸರ್ಕಾರವು ನೀಡುತ್ತಿದೆ. ಸರ್ಕಾರ ಕೆಲ ತಿಂಗಳಿಂದ ಗೌರವಧನ ನೀಡದೆ ಬಾಕಿ ಉಳಿಸಿಕೊಂಡಿರುವುದು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, "ರಾಜ್ಯದ ಹಲವು ಜಿಲ್ಲೆಗಳಲ್ಲಿ ಇರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕವಾಗಿ ಸಂದಾಯವಾಗಬೇಕಿದ್ದ ಗೌರವಧನ ಬಾಕಿ ಉಳಿಕೊಂಡಿರುವುದು ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ