ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳ ಬಳಿ ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾದ ಕುರಿತು ಜೈಲಾಧಿಕಾರಿಗಳು, ಭದ್ರತಾ ಸಿಬ್ಬಂದಿ, ಸಂಬಂಧಪಟ್ಟ ಬ್ಯಾರಕ್ನಲ್ಲಿರುವ ಕೈದಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ದಾಳಿ ವೇಳೆ ಕೆಲವು ಮೊಬೈಲ್ ಫೋನ್‌ಗಳು, ಚಾರ್ಜರ್ಗಳು ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿವೆ. ಈಗಾಗಲೇ ತನಿಖೆ ಆರಂಭಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಹತ್ಯೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ್ದ ಪ್ರಸಂಗ ಬೆಳಕಿಗೆ ಬಂದ ನಂತರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಚಟುವಟಿಕೆಗಳ ಮೇಲೆ ಬೆಂಗಳೂರು ಆಗ್ನೇಯ ವಿಭಾಗ ಹಾಗೂ ಸಿಸಿಬಿ ಪೊಲೀಸರು ನಿಗಾ ವಹಿಸಿದ್ದಾರೆ. ಶನಿವಾರ ಆಗ್ನೇಯ ವಿಭಾಗದ ಪೊಲೀಸರ ತಂಡ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದು, ಈ ವೇಳೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಮೊಬೈಲ್ ಫೋನ್ ಸೇರಿದಂತೆ 18 ಮೊಬೈಲ್ ಫೋನ್‌ಗಳ ಜೊತೆಗೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.