ಚಿಕ್ಕಮಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಯ ಅರಣ್ಯ ಗುತ್ತಿಗೆ ಒಪ್ಪಂದ ಕಾರ್ಯಗತಗೊಳಿಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ತನ್ನ ಒಡೆತನದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಟೌನ್‌ಶಿಪ್ ಸಹಿತ 282 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಮುಂದಾಗಿದೆ. ಕುದುರೆಮುಖದಲ್ಲಿ 1977ರಲ್ಲಿ ಗಣಿಗಾರಿಕೆ ಆರಂಭವಾಗಿದ್ದು, ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಉಳಿದುಕೊಳ್ಳಲು ಕುದುರೆಮುಖ ಟೌನ್‌ಶಿಪ್ ನಿರ್ಮಾಣವಾಗಿತ್ತು. ಸುಮಾರು 6,000ಕ್ಕೂ ಹೆಚ್ಚು ಉದ್ಯೋಗಿಗಳು ಹಾಗೂ ಅವರ ಕುಟುಂಬಗಳು ಇಲ್ಲಿ ನೆಲೆಸಿದ್ದವು. ವಸತಿ ಗೃಹ, ಸರ್ಕಾರಿ ಶಾಲೆ, ಕೆಂದ್ರೀಯ ವಿದ್ಯಾಲಯ, ಆಸ್ಪತ್ರೆ, ಆಟದ ಮೈದಾನ, ಮಾರುಕಟ್ಟೆ, ಸಿನಿಮಾ ಮಂದಿರ, ಕ್ರೀಡಾಂಗಣ, ಕ್ಲಬ್‌ಹೌಸ್ ಸೇರಿ ಎಲ್ಲಾ ಸೌಲಭ್ಯಗಳಿದ್ದವು.
ಗಣಿಗಾರಿಕೆಯಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮ ಗಮನಿಸಿದ ಸುಪ್ರೀಂ ಕೋರ್ಟ್ 2005ರಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಆದೇಶಿಸಿತು. 2006ರಲ್ಲಿ ಅಧಿಕೃತವಾಗಿ ಗಣಿಗಾರಿಕೆ ಸ್ಥಗಿತಗೊಂಡಿದೆ. ಗಣಿಗಾರಿಕೆ ನಿಲ್ಲುತ್ತಿದ್ದಂತೆ ಉದ್ಯೋಗಿಗಳ ವರ್ಗಾವಣೆಯಾಗಿದೆ. ಟೌನ್‌ಶಿಪ್‌ನಲ್ಲಿ ಮನೆಗಳು, ಕಚೇರಿಗಳು, ಶಾಲೆಗಳು ಇವೆ. ಕೆಲ ಕಟ್ಟಡಗಳನ್ನು ಅರಣ್ಯ ಇಲಾಖೆ ಬಳಕೆ ಮಾಡುತ್ತಿದೆ. ಸುತ್ತಮುತ್ತ ಇರುವ ಜನರಿಗಾಗಿ ಆಸ್ಪತ್ರೆ ಮತ್ತು ಶಾಲೆ ಕೂಡ ಚಾಲ್ತಿಯಲ್ಲಿವೆ. ಇದೀಗ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಯ ಅರಣ್ಯ ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವ ಕೆಐಒಸಿಎಲ್ ಕಾರ್ಯಗತಗೊಳಿಸುವ ತವಕದಲ್ಲಿದೆ. ಹಿಂದೆ ಕುದುರೆಮುಖದಲ್ಲಿ ಗಣಿಗಾರಿಕೆ ವೇಳೆ ಆಗಿದ್ದ ಅರಣ್ಯ ನಾಶಕ್ಕೆ ಸಂಬಂಧಿಸಿ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಜಾರಿಗೊಳಿಸುವ ತನಕ ಸಂಡೂರಿನಲ್ಲಿ ಅರಣ್ಯ ಭೂಮಿ ಹಸ್ತಾಂತರಿಸದಿರಲು ರಾಜ್ಯ ಅರಣ್ಯ ಇಲಾಖೆ ನಿರ್ಧರಿಸಿದೆ. ಅದಕ್ಕಾಗಿ ಕುದುರೆಮುಖ ಟೌನ್‌ಶಿಪ್ ಸೇರಿ ಅಷ್ಟೂ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸಿದ್ಧತೆ ನಡೆಸಿದೆ. ಅರಣ್ಯ ಇಲಾಖೆಗೆ ಪತ್ರವನ್ನೂ ಬರೆದಿದೆ. 'ಕುದುರೆಮುಖದಲ್ಲಿ ಸದ್ಯ ಸರ್ಕಾರಿ ಶಾಲೆ ಇದೆ. ಸಣ್ಣ ಪ್ರಮಾಣದ ಮಾರುಕಟ್ಟೆ, ಕೃಷಿ ಸಂಬಂಧಿತ ಚಟುವಟಿಕೆಗಳು ನಡೆಯುತ್ತಿವೆ. ಈ ಜಾಗವನ್ನು ಸಂಪೂರ್ಣವಾಗಿ ಅರಣ್ಯ ಇಲಾಖೆಗೆ ನೀಡುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಕುದುರೆಮುಖದ ಸುತ್ತಮುತ್ತಿನ ನೆಲ್ಲಿಬೀಡು, ಜಾಂಬ್ಲೆ, ಸಿಂಗ್ಸಾರ್, ಬಿಳಿಗಲ್ಲು ಗ್ರಾಮಸ್ಥರು ಕೂಡ ಸೌಕರ್ಯಗಳಿಂದ ವಂಚಿತರಾಗುತ್ತಾರೆ. ಮೂರು ದಶಕಗಳ ಕಾಲ ಕಂಪನಿಗೆ ಲಾಭಗಳಿಸಲು ಅವಕಾಶ ಮಾಡಿಕೊಟ್ಟ ಜನರ ಬದುಕುನ್ನು ಸಂಕಷ್ಟಕ್ಕೆ ತಳ್ಳಬಾರದು' ಎಂಬುದು ಸ್ಥಳೀಯರ ಆಕ್ಷೇಪ.
'