ಬೆಂಗಳೂರು : ನಮ್ಮ ಬಳಿ ಗುತ್ತಿಗೆದಾರರಿಗೆ ಬಾಕಿ ಬಿಲ್ ಗಳನ್ನು ನೀಡುವುದಕ್ಕೇ ಹಣವಿಲ್ಲ ಎಂದು ಅಲವತ್ತುಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯ ಭೂ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಚರ್ಚಿಸಲು ಸೆ.3 ಅಥವಾ 4ರಂದು ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯ ಭೂ ಸಂತ್ರಸ್ತರಿಗೆ ನ್ಯಾಯಾಲಯಗಳ ಆದೇಶಾನುಸಾರ ಪರಿಹಾರ ನೀಡಿದರೆ 2 ಲಕ್ಷ ಕೋಟಿ ರು. ಬೇಕು. ಇದು ಸಾಧ್ಯವಿಲ್ಲ. ರೈತರಿಗೂ ನಷ್ಟವಾಗದಂತೆ, ಸರ್ಕಾರಕ್ಕೂ ಹೊರೆಯಾಗದಂತಹ ಪರಿಹಾರ ಮೊತ್ತ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ರೈತರು ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳದೆ ಸರ್ಕಾರ ನಿಗದಿಪಡಿಸಿರುವ ಪರಿಹಾರಕ್ಕೆ ಒಪ್ಪದಿದ್ದರೆ ಯೋಜನೆ ಅನುಷ್ಠಾನ ಅಸಾಧ್ಯ. ನಮ್ಮ ಕೈಯಲ್ಲಿ ಏನೂ ಇಲ್ಲ. ಏಕೆಂದರೆ ಪರಿಹಾರಕ್ಕೇ 2 ಲಕ್ಷ ಕೋಟಿ ರು. ಬೇಕಾಗುತ್ತದೆ. ನಮ್ಮ ಬಳಿ ಗುತ್ತಿಗೆದಾರರಿಗೆ ಬಾಕಿ ಬಿಲ್ ಗಳನ್ನು ನೀಡುವುದಕ್ಕೇ ಹಣವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಯೋಜನೆ ಕುರಿತು ಇಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಬಾಗಲಕೋಟೆ, ವಿಜಯಪುರ ಜಿಲ್ಲಾ ಸಚಿವರು ಹಾಗೂ ಇತರೆ ನಾಯಕರೊಂದಿಗೆ ಚರ್ಚಿಸಿ, ಭೂ ಸಂತ್ರಸ್ತರಿಗೆ ನ್ಯಾಯೋಚಿತ ಪರಿಹಾರ ನೀಡುವ ಕುರಿತು ಚರ್ಚಿಸಲು ಸರ್ವಪಕ್ಷಗಳ ಮುಖಂಡರು ವಿಜಯಪುರ, ಬಾಗಲಕೋಟೆ ಭಾಗದ ಜನಪ್ರತಿನಿಧಿಗಳು, ರೈತ ಮುಖಂಡರ ಸಭೆ ಕರೆಯಲು ನಿರ್ಧರಿಸಿದ್ದೇವೆ ಎಂದರು.
ಈ ಯೋಜನೆಯ ಭೂ ಸಂತ್ರಸ್ತರಲ್ಲಿ ಸುಮಾರು 28,972 ಜನ ಸೂಚಿತ ಪರಿಹಾರ ಧನ ಒಪ್ಪಿಕೊಳ್ಳದೆ ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ಇವುಗಳ ಇತ್ಯರ್ಥವಾಗದೆ ಯೋಜನೆ ಜಾರಿ ಅಸಾಧ್ಯ. ನ್ಯಾಯಾಲಯ ಸೂಚಿಸಿರುವ ಪರಿಹಾರ ಮೊತ್ತದ ಉದಾಹರಣೆ ನೀಡಿದ ಉಪಮುಖ್ಯಮಂತ್ರಿ ಅವರು ಒಂದಷ್ಟು ಪ್ರಕರಣಗಳ ವಿವರಣೆ ನೀಡಿದರು. ಬಾಗಲಕೋಟೆಯಲ್ಲಿ ಒಂದು ಎಕರೆ ಭೂಮಿಗೆ ಬಡ್ಡಿ ಮೊತ್ತ ಸೇರಿ 23 ಕೋಟಿ ಪರಿಹಾರ ಸೂಚಿಸಲಾಗಿದೆ. ಕಸಬಾ ಬಿಜಾಪುರದಲ್ಲಿ ಕಾಲುವೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡ ಒಂದು ಎಕರೆ ಭೂಮಿಗೆ 11.92 ಕೋಟಿ ಪರಿಹಾರ ನೀಡಿ ಎಂದು ಹೇಳಲಾಗಿದೆ. ಜುಂಜರಕುಪ್ಪ ಆರ್ ಸಿಗೆ 10.22 ಕೋಟಿ ಪರಿಹಾರ, ವೀರಾಪುರದಲ್ಲಿನ ಸಬ್ ಮರ್ಜ್ ಜಮೀನಿಗೆ 15.49 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಾಲಯಗಳು ಆದೇಶಿಸಿವೆ. ಹೀಗೆ ಪರಿಹಾರ ಕೊಟ್ಟರೆ 2 ಲಕ್ಷ ಕೋಟಿ ರು. ಬೇಕು. ಇದು ಸಾಧ್ಯವಾ? ಎಂದರು. ಕಾಲುವೆಗಳ ನಿರ್ಮಾಣದ ಜಮೀನಿಗೆ ನಮ್ಮ ಅಧಿಕಾರಿಗಳು 10 ರಿಂದ 8 ಲಕ್ಷ ಪರಿಹಾರ ಸೂಚಿಸಿದ್ದಾರೆ. ಇಂತಹ ಕಡೆ ನ್ಯಾಯಾಲಯದವರು 74 ಲಕ್ಷ ಪರಿಹಾರಕ್ಕೆ ಸೂಚನೆ ನೀಡಿದ್ದಾರೆ. ಸಬ್ ಮರ್ಜ್ ಭೂಮಿಗಳಿಗೆ ಅಧಿಕಾರಿಗಳು ಎಕರೆಗೆ 16.50 ಲಕ್ಷ ಪರಿಹಾರ ಸೂಚಿಸಿದ್ದರೆ ನ್ಯಾಯಾಲಯ 1.20 ಕೋಟಿ ಪರಿಹಾರಕ್ಕೆ ತೀರ್ಪು ನೀಡಿದೆ. ಮುಳುಗಡೆ ಸ್ಥಳಾಂತರ ಪ್ರದೇಶಗಳಿಗೆ 15.50 ಲಕ್ಷ ಪರಿಹಾರ ಸೂಚಿಸಿದ್ದರೆ ನ್ಯಾಯಾಲಯವು 5 ಕೋಟಿ ಸೂಚಿಸಿದೆ ಎಂದರು. ಈ ಯೋಜನೆಗೆ ಸುಮಾರು 20 ಗ್ರಾಮಗಳು ಮುಳುಗಡೆ ಆಗಲಿವೆ. ಆರ್.ಸಿ ಗ್ರಾಮಗಳಿಗೆ ಎಂದು 1,33,867 ಎಕರೆ ಜಮೀನು ಅಗತ್ಯವಿದೆ. 29,568 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ಹಂತಗಳಲ್ಲಿ 44,947 ಎಕರೆ ಭೂಮಿಯಿದೆ. 59,354 ಎಕರೆ ಜಮೀನು ಸ್ವಾಧೀನಕ್ಕೆ ಕೆಲಸ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕಾಗಿದೆ ಎಂದು ವಿವರಿಸಿದರು.