ಬೆಂಗಳೂರು : ಕಳೆದ ವಾರ ಭೀಕರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ವಿಸ್ತೃತ ಯೋಜನಾ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಶೀಘ್ರದಲ್ಲಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಿಕೊಡುವದಾಗಿ ಭರವಸೆ ನೀಡಿದರು. ಕಮಲನಗರ ತಾಲೂಕಿನ ಅಕನಾಪೂರ್, ದಾಬಕಾ, ಮುತ್ತಖೇಡ, ನಂದಿಬಿಜಲಗಾಂವ್ ಹಾಗೂ ಔರಾದ್ ತಾಲೂಕಿನ ಹೊಕ್ರಾಣ, ಬಾವಲಗಾಂವ್, ಬೊಂತಿ ನಾಮಾ ನಾಯಕ ತಾಂಡ, ಹಂಗರಗಾ ಸೇರಿದಂತೆ ಹಲವಡೆ ಸಂಚಾರ ನಡೆಸಿ ನೆರೆ ಪೀಡಿತ ಭಾಗಗಳ ಪರಿವಿಕ್ಷಣೆ ನಡೆಸಿದರು. ಈ ವೇಳೆಯಲ್ಲಿ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಕೆರೆ ಕಟ್ಟೆ, ಸೇತುವೆ, ರಸ್ತೆ ಹಾಗೂ ಮನೆ ಗೋಡೆಗಳ ಕುಸಿತ ಅಲ್ಲದೆ ರೈತರ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಸೋಯಾಬೀನ್, ಉದ್ದು, ಹೆಸರು, ಹತ್ತಿ, ತೊಗರಿ, ಕಬ್ಬು ಸೇರಿದಂತೆ ತೋಟಗಾರಿಕೆ ಬೇಳೆಗಳು ನೆಲ ಕಚ್ಚಿರುವುದನ್ನು ಸಚಿವ ಈಶ್ವರ ಖಂಡ್ರೆ ಅವರು ಪರಿಶಿಲನೆ ನಡೆಸಿದರು. ಈ ವೇಳೆಯಲ್ಲಿ ಮಾತನಾಡಿದ ಅವರು ಔರಾದ್ ಮತ್ತು ಕಮಲನಗರ ತಾಲೂಕಿನಲ್ಲಿ ಅತಿ ಹೆಚ್ಚು 300 ಮಿಮೀ ದಾಖಲೆ ಮಳೆಯಾಗಿದೆ. ಹೀಗಾಗಿ ಈ ಅವಾಂತರವಾಗಿದೆ. ಈಗಾಗಲೇ ಇರುವ ಕೆರೆಗಳ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿತರಿಗೆ ಸೂಚಿಸಲಾಗಿದೆ. ಮಳೆಯಿಂದ ಸಾಕಷ್ಟು ಹಾನಿಯಾಗಿದೆ ಎನ್ ಡಿಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಅಡಿಯಲ್ಲಿ ಹಾನಿಯ ವಿಸ್ತೃತವಾದ ಯೋಜನಾ ವರದಿ ಆಧರಿಸಿ ಒಣಭೂಮಿಯ ರೈತರಿಗೆ 8500 ರು. ಹಾಗೂ ನೀರಿರಾವರಿ ಜಮಿನಿಗೆ 18000 ರು. ಪರಿಹಾರ ಧನ ನೀಡಲಾಗುವುದು ಎಂದು ಹೇಳಿದರು. ಹಾನಿಯ ವಿವರಗಳನ್ನು ಸರ್ಕಾರದ ಗಮನಕ್ಕೆ ತಂದು ತ್ವರಿತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹಾಗೂ ರೈತರಿಗೆ ವಿಮಾ ಕಂಪನಿಗಳ ಮೂಲಕ ಬೆಳೆ ವಿಮೆ ದೊರಕುವಂತೆ ಸಹ ಕ್ರಮ ಕೈಗೊಳ್ಳಲಾಗುವುದು ರೈತರ ಹಾಗೂ ಜನರ ಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಪ್ರಥಮ ಕರ್ತವ್ಯ ಎಂದು ಸಚಿವರು ಭರವಸೆ ನೀಡಿದರು. ಭಾರಿ ಮಳೆಯಿಂದಾಗಿ ನೀರಿನ ರಭಸಕ್ಕೆ ರೈತರ ಜಮೀನಿನಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿ ರೈತರು ಸಂಕಷ್ಟ ಅನುಭವಿಸಿರುವುದು ಗಮನಿಸಿದ್ದು ಸರ್ಕಾರ ಮಟ್ಟದಲ್ಲಿ ಈ ಸಂಬಂಧ ಚರ್ಚೆ ನಡೆಸಿ ವಿಶೇಷ ಅನುದಾನ ಮೂಲಕ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಪೌರಾಡಳಿತ ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಒ ಡಾ. ಗಿರೀಶ ಬದೋಲೆ, ಸಹಾಯಕ ಆಯುಕ್ತ ಮಹಮ್ಮದ ಶಕೀಲ್, ಮುಖಂಡರಾದ ಭೀಮಸೇನರಾವ್ ಸಿಂಧೆ, ಸುಧಾಕರ ಕೊಳ್ಳುರ, ಅಮರ ಜಾಧವ್, ರಾಜಕುಮಾರ್ ಹಲಬರ್ಗೆ, ಆನಂದ ಚವ್ಹಾಣ, ಚನ್ನಪ್ಪ ಉಪ್ಪೆ, ರಾಮಣ್ಣ ವಡಿಯಾರ, ಶಿವರಾಜ ದೇಶಮುಖ್, ಅಂಜಾರೆಡ್ಡಿ , ಪ್ರಕಾಶ ಪಾಟೀಲ್ ತೊರಣಾ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.