ಬೆಂಗಳೂರು : ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರವು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಆಯ್ಕೆಯ ವಿರುದ್ಧ ಮುಸ್ಲಿಂ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲವು ಮೌಲ್ವಿಗಳು ಬಾನು ಮುಷ್ತಾಕ್ ವಿರುದ್ಧ ಫತ್ವಾ ಹೊರಡಿಸಲು ಮುಂದಾಗಿದ್ದರು ಎಂಬ ವಿಚಾರ ಬಹಿರಂಗವಾಗಿದೆ. ಆದರೆ ಸಚಿವ ಜಮೀರ್ ಅಹ್ಮದ್, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌಲ್ವಿಗಳ ಮೇಲೆ ಒತ್ತಡ ಹೇರಿ, ಫತ್ವಾ ಹೊರಡಿಸಿದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮುಸ್ಲಿಂ ಮುಖಂಡ ಸಾದಿಕ್ ಪಾಷಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಸರ್ಕಾರ 85% ಮುಸ್ಲಿಂ ಒಟ್‌ಗಳಿಂದ ಅಧಿಕಾರಕ್ಕೆ ಬಂದಿದೆ. ಆದರೆ, ಮುಸ್ಲಿಂ ಸಮುದಾಯಕ್ಕೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಮುಸ್ಲಿಂ ಯುವಕ-ಯುವತಿಯರಿಗೆ ಅವಕಾಶ ಕೊಡಬೇಕಿತ್ತು. ಬದಲಿಗೆ, ನಮ್ಮನ್ನು ಖುಷಿಪಡಿಸಲು ಈ ರೀತಿಯ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ನಮಗೆ ಅಲ್ಲಾ ಒಬ್ಬರೇ ದೇವರು. ಕುಂಕುಮ, ಆರತಿ ಬೆಳಗಿದರೆ ಮುಸ್ಲಿಂ ಧರ್ಮವೇ ಹಾಳಾಗುತ್ತದೆ. ಬಾನು ಮುಷ್ತಾಕ್ ಅವರ ನಡವಳಿಕೆ, ಆಚರಣೆ ಮುಸ್ಲಿಮರಂತಿಲ್ಲ. ಆಗಾಗ ಮುಸ್ಲಿಮರಂತೆ ಕಾಣಿಸುತ್ತಾರೆ, ಹೆಸರು ಮಾತ್ರ ಮುಸ್ಲಿಂರದ್ದಿದೆ ಆದರೆ ಅವರ ನಡೆಯಿಂದ ಮುಸ್ಲಿಂರಂತೆ ಕಾಣುವುದಿಲ್ಲ, ಧಾರ್ಮಿಕ ಆಚರಣೆಗಳಿಲ್ಲ ಎನ್ನುವ ಮೂಲಕ ದಸರಾ ಉದ್ಘಾಟನೆ, ಪೂಜೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಾನು ಮುಷ್ತಾಕ್ ಆಯ್ಕೆಯಿಂದ ಹಿಂದೂ ಸಮುದಾಯದ ಭಾವನೆಗಳಿಗೂ ಧಕ್ಕೆಯಾಗುತ್ತದೆ. ಇದು ಕೋಮು ಗಲಭೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಬಾನು ಮುಷ್ತಾಕ್ ವಿರುದ್ಧ ಮೌಲ್ವಿಗಳು ಫತ್ವಾ ಹೊರಡಿಸಲು ಸಿದ್ಧರಿದ್ದರೂ, ಸರ್ಕಾರದ ಒತ್ತಡ ಮತ್ತು ಬೆದರಿಕೆಯಿಂದ ತಡೆದಿದ್ದಾರೆ. ಸಚಿವ ಜಮೀರ್, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಂದ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ದ್ರೋಹ ಬಗೆದಿದೆ. ಇದೇ ರೀತಿಯಾಗಿ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಸಾದಿಕ್ ಪಾಷಾ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯಿಂದ ಮೈಸೂರು ದಸರಾ ಆಚರಣೆಯ ಸಂದರ್ಭದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಭೀತಿ ಎದುರಾಗಿದೆ. ಸರ್ಕಾರ ಈ ವಿವಾದವನ್ನು ಹೇಗೆ ನಿಭಾಯಿಸಲಿದೆ ಎಂಬುದು ಕಾದು ನೋಡಬೇಕಾಗಿದೆ.