ಮಂಡ್ಯ: ಕಟಾವು ಮಾಡಿಕೊಂಡು ಮೈಷುಗರ್ ಕಾರ್ಖಾನೆಗೆ ತಂದಿರುವ ಕಬ್ಬು ಒಣಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿ ಸಮರ್ಪಕವಾಗಿ ಕಬ್ಬು ನುರಿಸಬೇಕು ಎಂದು ಆಗ್ರಹಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಮೈಷುಗರ್ ಕಾರ್ಖಾನೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಮೈಷುಗರ್ ಕಾರ್ಖಾನೆ ಆವರಣದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಅಧ್ಯಕ್ಷರು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆಯನ್ನು ಸ್ಥಗಿತಗೊಳಿಸಿದರೆ ಕಟಾವು ಮತ್ತು ಸಾಗಾಣಿಕೆ ಕಾರ್ಮಿಕರು ಮತ್ತೆ ಮರಳಿ ಬರುವ ನಿರೀಕ್ಷೆಯಿಲ್ಲ. ಏಕೆಂದರೆ ಕೂಲಿ ಕಾರ್ಮಿಕರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ, ಕಾರ್ಖಾನೆ ಆವರಣದಲ್ಲಿರುವ ಎತ್ತುಗಳಿಗೆ ನೀರು ಕುಡಿಸುವ ತೊಟ್ಟಿಯಲ್ಲಿನ ನೀರನ್ನೇ ತಮ್ಮ ಅಡುಗೆ ಮಾಡಿಕೊಳ್ಳಲು ಹಾಗೂ ದಿನಚರಿ ಕೆಲಸಗಳಿಗೆ ಬಳಸಿಕೊಳ್ಳಬೇಕಾಗಿದೆ. ಇದನ್ನು ಸರಿಪಡಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಟ್ರ್ಯಾಕ್ಟರ್ ಮತ್ತು ಎತ್ತಿನ ಗಾಡಿಗಳಲ್ಲಿ ತೆಗೆದುಕೊಂಡು ಬಂದಿರುವ ಕಬ್ಬು ರಸ್ತೆಯಲ್ಲಿಯೇ ಒಣಗುತ್ತಿದೆ. ಅದು ಸಾಲದೆಂಬಂತೆ ಕಳೆದು ಮೂರ್ನಾಲ್ಕು ದಿನಗಳಿಂದ ಸರತಿ ಸಾಲಿನಲ್ಲಿಯೇ ಕಬ್ಬು ತುಂಬಿರುವ ವಾಹನಗಳು ರಸ್ತೆ ಉದ್ದಕ್ಕೂ ನಿಂತಿರುವುದು ಬೇಸರ ತರಿಸಿದೆ. ಕಾರ್ಖಾನೆ ಒಳಗಡೆ ಏನು ಮಾಡುತ್ತಿದ್ದಾರೆ ಎನ್ನುವುದನ್ನು ರೈತರು ಪ್ರಶ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಯನ್ನು ನಿರ್ವಹಿಸುತ್ತಿರುವ ಆರ್.ಬಿ.ಟೆಕ್ ಕಂಪನಿ ತಾಂತ್ರಿಕವಾಗಿ ದುರ್ಬಲವಾಗಿದೆ. ಈಗಾಗಲೇ ಟನ್ ಒಂದಕ್ಕೆ ನುರಿಸಲು ₹900 ನೀಡಲಾಗುತ್ತಿದೆ. ಹಾಗಾಗಿಯೂ ಸಕ್ಕರೆ ಇಳುವರಿ ಶೇ 9ರ ಬದಲು ಶೇ 6ಕ್ಕೆ ಇಳಿದಿದೆ. ಇದರಿಂದಾಗಿ ಕಾರ್ಖಾನೆಯನ್ನು ನಷ್ಟಕ್ಕೆ ದೂಡುವ ಸಂಚು ನಡೆದಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಸುನಂದಾ ಜಯರಾಂ, ಕೃಷ್ಣ, ಇಂಡುವಾಳು ಚಂದ್ರಶೇಖರ್, ಎಚ್.ಡಿ.ಜಯರಾಂ, ಮಂಜುನಾಥ್, ಎಂ.ವಿ.ಕೃಷ್ಣ, ಶಿವಳ್ಳಿ ಚಂದ್ರು, ಸಂತೋಷ್ ಭಾಗವಹಿಸಿದ್ದರು.