ಬೆಂಗಳೂರು: ಎಪಿಎಂಸಿ ಅಧಿಕಾರಿಗಳ ಸಭೆಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಹಾಗೂ ವಿಳಂಬ ನೀತಿ ಅನುಸರಿಸುವ ಎಪಿಎಂಸಿ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕೃಷಿ ಮಾರುಕಟ್ಟೆ ಇಲಾಖೆ ಸಭಾಂಗಣದಲ್ಲಿ ಇಂದು ನಾಲ್ಕು ಕಂದಾಯ ವಿಭಾಗಗಳ ಎಪಿಎಂಸಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ನಿಗದಿತ ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸದ ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದರು. ಮೂಲ ಸೌಕರ್ಯ ನಿರ್ಮಾಣ ಮತ್ತು ಕೋಲ್ಡ್ ಸ್ಟೋರೇಜ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಒಂದು ವಾರದಲ್ಲಿ ಮತ್ತೆ ಸಭೆ ಕರೆಯಲಿದ್ದು, ಇದುವರೆಗೆ ನಬಾರ್ಡ್, ಐಆರ್‌ಡಿಎಫ್ ನಿಂದ ಎಷ್ಟು ನೆರವು ಲಭ್ಯವಾಗಿದೆ. ಈ ನೆರವು ಮತ್ತು ಎಪಿಎಂಸಿ ಅನುದಾನದಲ್ಲಿ ಯಾವ ಯಾವ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅವುಗಳ ಸ್ಥಿತಿಗತಿ ಏನು? ಯಾವ ಯೋಜನೆಗಳು ಅಗತ್ಯವಿಲ್ಲ ಎಂಬ ಬಗ್ಗೆ ವರದಿ ಕೊಡಿ ಎಂದು ಸೂಚನೆ ನೀಡಿದರು. ಏಳು ಹೊಸ ಎಪಿಎಂಸಿಗಳು ಅಸ್ತಿತ್ವಕ್ಕೆ ಬಂದಿವೆ. ಹೊಸ ಎಪಿಎಂಸಿಗಳನ್ನು ಹೊರತುಪಡಿಸಿ ಇತರ ಎಪಿಎಂಸಿಗಳಲ್ಲಿ ಇದುವರೆಗೆ ಏಕೆ ಮೂಲ ಸೌಕರ್ಯ ನಿರ್ಮಿಸಿಲ್ಲ. ರಸ್ತೆ, ಚರಂಡಿ ಮತ್ತು ಫ್ಲಾಟ್‌ಫಾರ್ಮಗಳು ಅಗತ್ಯವಿದ್ದು, ಯಾವ ಯಾವ ಎಪಿಎಂಸಿಗಳಲ್ಲಿ ಮೂಲಸೌಕರ್ಯ ಇದುವರೆಗೆ ಆಗಿಲ್ಲ ಎಂದು ಪ್ರಶ್ನಿಸಿದರು. ಕಾಂಕ್ರೀಟ್ ರಸ್ತೆಗಳನ್ನು ಮಳೆಗಾಲದ ಸಮಯದಲ್ಲೇ ನಿರ್ಮಾಣ ಮಾಡುವುದು ಸೂಕ್ತ. ವಿಳಂಬಕ್ಕೆ ಮಳೆಗಾಲದ ನೆಪ ನೀಡಬೇಡಿ ಎಂದರು. ಅನುದಾನ ಲಭ್ಯ ಇದೆ ಎಂಬ ಕಾರಣಕ್ಕೆ ಗೋಡೌನ್‌ಗಳನ್ನು ನಿರ್ಮಾಣ ಮಾಡಬೇಡಿ. ಬಹುತೇಕ ಎಪಿಎಂಸಿಗಳಲ್ಲಿ ಗೋಡೌನ್‌ಗಳು ಖಾಲಿ ಇವೆ. ಇಂತಹ ಗೋಡೌನ್‌ಗಳನ್ನು ಕಡಿಮೆ ದರದಲ್ಲಿ ಬಾಡಿಗೆ ಕೊಡುತ್ತಿದ್ದೇವೆ. ಅಗತ್ಯ ಇರುವ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಬೇಕು ಎಂದು ಸೂಚಿಸಿದರು. ಎಲ್ಲ ವಿಭಾಗಗಳಲ್ಲಿ ಎಷ್ಟು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಎಷ್ಟು ಟೆಂಡರ್ ಕರೆಯಲಾಗಿದೆ ಎಂಬ ಬಗ್ಗೆ ವರದಿ ಕೊಡಿ. ಅನುಮೋದನೆ ದೊರಕಿದ್ದರೂ ಅನಗತ್ಯ ಎಂದು ಕಂಡುಬಂದರೆ ಅಂತಹ ಕಾಮಗಾರಗಳನ್ನು ಸ್ಥಗಿತಗೊಳಿಸಿ, ಒಂದು ವೇಳೆ ಟೆಂಡರ್ ಆಗಿದ್ದರೆ ಮಾತ್ರ ಮುಂದುವರಿಸಿ ಎಂದು ಸಚಿವರು ನಿರ್ದೇಶನ ನೀಡಿದರು.
ಎಪಿಎಂಸಿಗಳ ಆಸ್ತಿ ರಕ್ಷಣೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ, ಅನೇಕ ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ಎಪಿಎಂಸಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾನೇ ಲೋಪ ಗುರುತಿಸಿ ಸೂಚನೆ ನೀಡಿದ್ದೇನೆ. ಕಟ್ಟಡಗಳ ಸಂರಕ್ಷಣೆ ಕಡೆಗೂ ಅಧಿಕಾರಿಗಳು ಗಮನ ನೀಡಬೇಕು ಎಂದು ಹೇಳಿದರು. ಮುಂದಿನ ಸಭೆ ವೇಳೆಗೆ ಪ್ರತಿಯೊಂದು ಎಪಿಎಂಸಿಗಳ ವರದಿ ಬೇಕು. ಏನೇನು ಕೆಲಸ ಆಗಬೇಕಿದೆ? ಈಗ ಕೈಗೊಂಡಿರುವ ಕಾಮಗಾರಿಗಳು ಯಾವ ಕಾರಣಕ್ಕೆ ವಿಳಂಬವಾಗಿವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಇದುವರೆಗೂ ಮೂಲ ಸೌಕರ್ಯಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಸಭೆಯಲ್ಲಿ ಹೆಚ್ಚುವರಿ ನಿರ್ದೇಶಕಿ ಪುಷ್ಪಾ, ಜಂಟಿ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಅಧೀಕ್ಷಕ ಅಭಿಯಂತರ ರಘುನಂದನ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.