image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರೈತರ ಎರಡನೇ ಬೆಳೆಗೆ ಈ ವರ್ಷ ತುಂಗಭದ್ರಾ ಅಣೆಕಟ್ಟೆಯ ನೀರು ನೀಡಲು ಸಾಧ್ಯವಾಗುತ್ತಿಲ್ಲ : ಡಿ ಕೆ ಶಿ

ರೈತರ ಎರಡನೇ ಬೆಳೆಗೆ ಈ ವರ್ಷ ತುಂಗಭದ್ರಾ ಅಣೆಕಟ್ಟೆಯ ನೀರು ನೀಡಲು ಸಾಧ್ಯವಾಗುತ್ತಿಲ್ಲ : ಡಿ ಕೆ ಶಿ

ಬೆಂಗಳೂರು: ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಕ್ರಸ್ಟ್ ಗೇಟ್​​ಗಳನ್ನು ಬದಲಾವಣೆ ಮಾಡಲು ತುಂಗಭದ್ರಾ ಮಂಡಳಿಯವರು ಟೆಂಡರ್ ಕರೆದಿದ್ದಾರೆ. ಈಗಾಗಲೇ ಅಹಮದಾಬಾದ್ ಸಂಸ್ಥೆಯವರಿಗೆ ಗುತ್ತಿಗೆ ನೀಡಲಾಗಿದೆ. ಆರು ಗೇಟ್​​ಗಳ ತಯಾರಿ ಕೆಲಸ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು. ಈಗಾಗಲೇ ಗೇಟ್​​ಗಳ ಫ್ಯಾಬ್ರಿಕೇಷನ್ ಕೆಲಸ ಪ್ರಾರಂಭವಾಗಿದೆ. ಅಗತ್ಯ ಸಲಕರಣೆಗಳು ಬರುತ್ತಿವೆ. ಗದಗ, ಹೊಸಪೇಟೆಯಲ್ಲಿ ಎರಡೆರಡು ಕಡೆ ಗೇಟ್​​ಗಳ ತಯಾರಿ ಕೆಲಸ ಮುಂದುವರೆದಿದೆ. ಜಿಂದಾಲ್ ಅವರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಆಂಧ್ರ ಪ್ರದೇಶದ ಎಂಜಿನಿಯರ್ ಅವರಿಗೆ ಕೆಲಸವನ್ನು ಇನ್ನೂ ವೇಗಗೊಳಿಸಿ ಎಂದು ಸೂಚನೆ ನೀಡಿದ್ದೇನೆ. ಗೇಟ್ ತಯಾರಿಸಲು ಬೇರೆಯವರಿಗೂ ಅವಕಾಶ ನೀಡಿ, ಇದರಿಂದ ಕೆಲಸ ಬೇಗ ಆಗುತ್ತದೆ ಎಂದು ಹೇಳಿದ್ದೇನೆ ಎಂದರು. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹ ಮಾಡಬೇಕಾದ ಕಾರಣಕ್ಕೆ ಎರಡನೇ ಬೆಳೆಗೆ ಈ ವರ್ಷ ನೀರು ನೀಡಲು ಸಾಧ್ಯವಾಗುತ್ತಿಲ್ಲ. ನೀರು ಕೊಟ್ಟರೆ ಗೇಟ್ ಅಳವಡಿಕೆ ಅಸಾಧ್ಯ. ಬೆಳೆಯ ಬಗ್ಗೆ ನಮ್ಮ ರೈತರಿಗೆ ಆತಂಕವಾಗಿದೆ. ನಾನು ಸಹ ಅಧಿಕಾರಿಗಳ ಬಳಿ ಮಾತನಾಡಿದೆ. ಆಗ ಅವರು ಅಣೆಕಟ್ಟು ಮುಖ್ಯವೇ? ಬೆಳೆ ಮುಖ್ಯವೇ? ಎಂದು ಕೇಳಿದರು. ಕುಡಿಯುವ ನೀರಿಗೆ ಹಾಗೂ ಕೈಗಾರಿಕೆಗಳಿಗೆ ನಾವು ಯಥಾಸ್ಥಿತಿಯಲ್ಲಿ ನೀರು ಹರಿಸುತ್ತೇವೆ. ಸ್ಟ್ರಚ್ಚರ್ ದುರಸ್ತಿ ಕೆಲಸಗಳನ್ನು ತುರ್ತಾಗಿ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಹೇಳಿದರು.

ಕನ್ನಯ್ಯ ನಾಯ್ಡು ಅವರ ಸಲಹೆಯಂತೆ, ಅಣೆಕಟ್ಟೆಯಲ್ಲಿ ಸಂಪೂರ್ಣ ನೀರು ಸಂಗ್ರಹ ಮಾಡದೇ 1,626 ಅಡಿ ಅಂದರೆ ಶೇ.76ರಷ್ಟು ನೀರು ಸಂಗ್ರಹ ಮಾಡಬೇಕು. ಒಟ್ಟು 80 ಟಿಎಂಸಿ ನೀರನ್ನು ಸಂಗ್ರಹ ಮಾಡಲು ತುಂಗಭದ್ರಾ ಮಂಡಳಿ ತೀರ್ಮಾನ ಮಾಡಿದೆ. ಈ ಮಂಡಳಿಯಲ್ಲಿ ನಮ್ಮ ರಾಜ್ಯದ ಯಾವುದೇ ಅಧಿಕಾರವಿಲ್ಲ. ಬೇರೆಯವರು ದುಡ್ಡು ನೀಡುತ್ತಾರೋ ಬಿಡುತ್ತಾರೋ, ನಾವೇ ದುಡ್ಡು ನೀಡಿ ಅಣೆಕಟ್ಟು ಉಳಿಸಿಕೊಳ್ಳಲು ತಯಾರಿದ್ದೇವೆ. ನಮ್ಮ ರೈತರ ಜೊತೆಗೆ ಅವರ ರೈತರನ್ನೂ ನಾವು ಉಳಿಸುತ್ತೇವೆ ಎಂದರು. ದುರಸ್ತಿ ವೆಚ್ಚ ಕರ್ನಾಟಕದ್ದು ಶೇ.66, ಆಂಧ್ರ ಹಾಗೂ ತೆಲಂಗಾಣ ಸೇರಿ 33ರಷ್ಟು ಹಣ ನೀಡಬೇಕು. ಆದರೆ ಆಂಧ್ರದವರು ಹಣವನ್ನೇ ಮೀಸಲಿಟ್ಟಿರಲಿಲ್ಲ. ಅವರಿಂದ ಆನಂತರ ಹಣ ಪಡೆದರಾಯಿತು, ಅವರ ಪಾಲಿನ ಹಣವನ್ನೂ ನಾವೇ ನೀಡುತ್ತೇವೆ ಎಂದು ಅಧಿಕಾರಿಗಳಿಗೆ ಹೇಳಿದೆ. ನಾವು ದುಡ್ಡು ನೀಡಲು ಹೋದರೂ ಅವರು ತೆಗೆದುಕೊಳ್ಳಲು ತಯಾರಿಲ್ಲ. ನಮಗೆ, ನಮ್ಮ ರೈತರಿಗೆ ತೊಂದರೆಯಾಗುವುದು ಬೇಡ ಎಂದು ನಾವೇ ಹಣ ನೀಡಲು ಮುಂದಾದೆವು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನವಿಲೆ ಬಳಿ ಸಮತೋಲಿತ ಅಣೆಕಟ್ಟು ನಿರ್ಮಾಣದ ಬಗ್ಗೆ ಆಂಧ್ರ ಮುಖ್ಯಮಂತ್ರಿಗಳ ಬಳಿ ಮಾತನಾಡಲು ನಾನು ಮೂರು ಬಾರಿ ಪ್ರಯತ್ನಪಟ್ಟೆ, ಆದರೆ ಸಾಧ್ಯವಾಗಲಿಲ್ಲ. ತಂಡವನ್ನು ಸಹ ಚರ್ಚೆ ನಡೆಸಲು ಕಳಿಸಿದ್ದೆ. ಆದರೆ ಅವರು ಮುಂದೆ ಬರಲಿಲ್ಲ. ಆಂಧ್ರ ಮುಖ್ಯಮಂತ್ರಿಯವರು ಏಕೆ ಸಮಯ ನೀಡಲಿಲ್ಲ ಎಂಬುದು ನನಗೆ ತಿಳಿದಿಲ್ಲ. ಏಕೆಂದರೆ ಹೆಚ್ಚಿನ ನೀರು ಅವರಿಗೆ ಹೋಗುತ್ತಿದೆಯಲ್ಲ ಎಂದು ಇರಬಹುದೇನೋ ಎಂದರು. ಅಣೆಕಟ್ಟೆಯ ಸಂಗ್ರಹ ಸಾಮರ್ಥ್ಯ ಹೂಳಿನಿಂದಾಗಿ 105 ಟಿಎಂಸಿಗೆ ಕುಸಿದಿದೆ. ಆದ ಕಾರಣಕ್ಕೆ 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ನವಿಲೆ ಬಳಿ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ನಾವು ಯೋಜನೆ ರೂಪಿಸಿದ್ದೆವು. ಈ ಯೋಜನೆ ಅನುಮೋದನೆಗೆ ಮಂಡಳಿಯ ಮುಂದೆ 22.11.2024ರಂದು ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೇ, ಅನೇಕ ಸಭೆಗಳಲ್ಲಿ ಈ ವಿಚಾರ ಮಂಡಿಸಲಾಗಿದೆ. ಪತ್ರ ಬರೆದು ಒತ್ತಡ ಹಾಕಲಾಗಿದೆ. ಎರಡು ರಾಜ್ಯದ ಮುಖ್ಯಮಂತ್ರಿಗಳಿಗೆ 14.02.25ರಂದು ಪತ್ರ ಬರೆದಿದ್ದೇನೆ. ಸಂಬಂಧಪಟ್ಟ ಮಂತ್ರಿಗಳ ಜೊತೆಯಲ್ಲಿಯೂ ನಾನು ಮಾತನಾಡಿದ್ದೇನೆ ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ