image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಹುದಿನಗಳ ಬೇಡಿಕೆಯಾದ ಹೊಸ ಕರ್ನಾಟಕ ಅಪಾರ್ಟ್ಮೆಂಟ್ ಮಸೂದೆ 2025ರ ಕರಡು ಸಿದ್ಧ

ಬಹುದಿನಗಳ ಬೇಡಿಕೆಯಾದ ಹೊಸ ಕರ್ನಾಟಕ ಅಪಾರ್ಟ್ಮೆಂಟ್ ಮಸೂದೆ 2025ರ ಕರಡು ಸಿದ್ಧ

ಬೆಂಗಳೂರು: ಬಹುನಿರೀಕ್ಷಿತ ಅಪಾರ್ಟ್ಮೆಂಟ್ ಮನೆ ಮಾಲೀಕರ ಹಿತರಕ್ಷಣೆ ಕಾಪಾಡುವ ಹಾಗು ಅಪಾರ್ಟ್ಮೆಂಟ್ ನಿರ್ವಹಣೆಗೆ ಸ್ಪಷ್ಟ ರೂಪುರೇಷೆ ಕಲ್ಪಿಸುವ ಕರ್ನಾಟಕ ಅಪಾರ್ಟ್ಮೆಂಟ್ (ಮಾಲಿಕತ್ವ ಮತ್ತು ನಿರ್ವಹಣೆ) ಮಸೂದೆ 2025 ಕರಡನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.‌ ಆ ಮೂಲಕ ದಶಕಗಳಿಂದ ನಿರೀಕ್ಷಿಸಲಾಗುತ್ತಿದ್ದ ಹೊಸ ಕಾನೂನು ಇದೀಗ ನನಸಾಗುವ ಕಾಲ ಕೂಡಿಬಂದಿದೆ. ಅಪಾರ್ಟ್ಮೆಂಟ್ ಮಾಲೀಕರು, ಅಪಾರ್ಟ್ಮೆಂಟ್ ಮನೆ ಮಾಲೀಕರ ಅಸೋಸಿಯೇಷನ್ ಗಳ ಬಹುದಿನಗಳ ಬೇಡಿಕೆಯಾದ ಹೊಸ ಕರ್ನಾಟಕ ಅಪಾರ್ಟ್ಮೆಂಟ್ (ಮಾಲಿಕತ್ವ ಮತ್ತು ನಿರ್ವಹಣೆ) ಮಸೂದೆ 2025 ಕರಡು ಸಿದ್ಧಗೊಳಿಸಿದೆ. ಆ ಮೂಲಕ 53 ವರ್ಷ ಹಳೆಯ ಕರ್ನಾಟಕ ಅಪಾರ್ಟ್ಮೆಂಟ್ ಮಾಲಿಕತ್ವ ಕಾಯ್ದೆ 1972ಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.‌ ಪ್ರಸ್ತಾಪಿತ ಹೊಸ ಮಸೂದೆ ಮೂಲಕ ರಾಜ್ಯದ ಅಪಾರ್ಟ್ಮೆಂಟ್ ಮನೆ ಮಾಲೀಕರ ಹಿತರಕ್ಷಣೆ, ಹಕ್ಕು ರಕ್ಷಣೆಗೆ ಇನ್ನಷ್ಟು ಬಲ ಸಿಗಲಿದೆ.

ಹಳೆಯ ಕಾಯ್ದೆ 1972ರಲ್ಲಿ ರೂಪಿಸಲಾಗಿತ್ತು. ಆ ಸನ್ನಿವೇಶದಲ್ಲಿ ಅಪಾರ್ಟ್ಮೆಂಟ್ ಸಂಸ್ಕೃತಿ ವಿರಳವಾಗಿತ್ತು. ಕಳೆದ 20 ವರ್ಷಗಳಿಂದೀಚೆಗೆ ಅಪಾರ್ಟ್ಮೆಂಟ್ ಸಂಸ್ಕೃತಿ ವ್ಯಾಪಕವಾಗಿ ಬೆಳೆದು ಬಂದಿದೆ.‌ ಆದರೆ ಈಗಿನ ಸನ್ನಿವೇಶಕ್ಕೆ ಅನುಗುಣವಾಗಿ ಕಾನೂನುಗಳಲ್ಲಿ ತಿದ್ದುಪಡಿಯಾಗಿಲ್ಲ.‌ ಪ್ರಸ್ತಾಪಿತ ಹೊಸ ಕಾನೂನು ಅಪಾರ್ಟ್ಮೆಂಟ್ ಮನೆ ಮಾಲೀಕರಿ ಹೆಚ್ಚಿನ ಅಧಿಕಾರ ನೀಡಲಿದೆ. ಹಳೆಯ ಕಾನೂನಿನಲ್ಲಿನ ಲೋಪದೋಷ, ನ್ಯೂನತೆಗಳನ್ನು ಬದಲಾಯಿಸಲಿದೆ. ಹೊಸ ಪ್ರಸ್ತಾಪಿತ ಮಸೂದೆಯಲ್ಲಿ ಕಟ್ಟಡದಲ್ಲಿನ ಒಂದು ಅಪಾರ್ಟ್ಮೆಂಟ್ ನ ಮಾಲಿಕತ್ವ ಸಂಬಂಧಿತ ಕಾನೂನುಗಳನ್ನು ಕ್ರೋಢೀಕರಿಸಲಾಗಿದೆ. ರಾಜ್ಯದಲ್ಲಿನ ಅಪಾರ್ಟ್ಮೆಂಟ್ ಗಳ ನಿರ್ವಹಣೆಗಾಗಿ ಸ್ಪಷ್ಟ ರೂಪುರೇಷೆ ರೂಪಿಸಲಾಗಿದೆ. ಅಪಾರ್ಟ್‌ಮೆಂಟ್‌ ಮಾಲೀಕರ ಸಂಘಗಳ ನೋಂದಣಿ ಮತ್ತು ನಿರ್ವಹಣೆ ಗೊಂದಲ ಪರಿಹಾರ, ಅಪಾರ್ಟ್‌ಮೆಂಟ್‌ಗಳಲ್ಲಿನ ಗೃಹ ಖರೀದಿದಾರರ ಸಂಘಕ್ಕೆ ಕಾಮನ್‌ ಏರಿಯಾ ಹಸ್ತಾಂತರ, ಬಿಲ್ಡರ್‌ಗಳಿಂದ ಭೂಮಿಯ ಮೇಲಿನ ಹಕ್ಕು ಸಂಘಗಳಿಗೆ ವರ್ಗಾವಣೆ ಮಾಡುವುದು ಹೊಸ ಕರಡು ಮಸೂದೆಯ ಉದ್ದೇಶವಾಗಿದೆ.

ಪ್ರಮುಖವಾಗಿ ಒಂದು ಕಟ್ಟಡದಲ್ಲಿ ಒಂದು ಪ್ರತ್ಯೇಕ ಅಪಾರ್ಟ್‌ಮೆಂಟ್‌ನ ಮಾಲೀಕತ್ವ ಮತ್ತು ಅಂತಹ ಅಪಾರ್ಟ್‌ಮೆಂಟ್‌ಗೆ ಸಂಬಂಧಿಸಿದ ಸಾಮಾನ್ಯ ಪ್ರದೇಶಗಳಾದ ಮೆಟ್ಟಿಲು, ಬಾಲ್ಕನಿ, ಪಾಸೇಜು, ಲಿಫ್ಟ್, ಟೆರೇಸ್, ಪಾರ್ಕ್, ಪ್ಲೇ ಏರಿಯಾ, ಲಾಭೀಸ್, ವಾಟರ್ ಟ್ಯಾಂಕ್ಸ್, ಸಂಪ್ಸ್ ಇರುವ ಪ್ರದೇಶ ಮತ್ತು ಸೌಲಭ್ಯಗಳಲ್ಲಿ ಅವಿಭಜಿತ ಪಾಲನ್ನು ಹಂಚಲು ಕಾನೂನು ರೂಪಿಸಲಾಗಿದೆ. ಜೊತೆಗೆ ಅಪಾರ್ಟ್‌ಮೆಂಟ್‌ಗಳ ಆಡಳಿತ, ಸಾಮಾನ್ಯ ಪ್ರದೇಶಗಳು ಮತ್ತು ಅಪಾರ್ಟ್‌ಮೆಂಟ್ ಕಟ್ಟಡಗಳ ಸೌಲಭ್ಯಗಳ ಕಾರ್ಯಾಚರಣೆ ಮತ್ತು ಬಳಕೆಗೆ ಒಂದು ಕಾರ್ಯವಿಧಾನವನ್ನು ಒದಗಿಸುವುದು ಈ ಹೊಸ ಪ್ರಸ್ತಾಪಿತ ಮಸೂದೆಯ ಉದ್ದೇಶವಾಗಿದೆ.‌ ಪ್ರಸ್ತಾಪಿತ ಹೊಸ ಕರಡು ಮಸೂದೆ ಪ್ರಕಾರ ಅಪಾರ್ಟ್ಮೆಂಟ್ ಮನೆ ಮಾಲೀಕ ತನ್ನ ಅಪಾರ್ಟ್ಮೆಂಟ್ ನ ಪ್ರತ್ಯೇಕ ಸ್ವಾಧೀನ ಹಾಗೂ ಮಾಲಿಕತ್ವದ ಹಕ್ಕನ್ನು ಹೊಂದಿರುತ್ತಾನೆ. ಅದರ ಜೊತೆಗೆ ಅಪಾರ್ಟ್ಮೆಂಟ್ ನ ಸಾಮಾನ್ಯ ಪ್ರದೇಶಗಳ ಬಾಲ್ಕನಿ, ಮೆಟ್ಟಿಲುಗಳು, ಲಾಂಜ್ ಮುಂತಾದ ಸ್ಥಳಗಳ ಅವಿಭಜಿತ ಪಾಲಿನ ಹಕ್ಕುದಾರರಾಗಿರುತ್ತಾರೆ. ಈ ಅವಿಭಜಿತ ಪಾಲನ್ನು ಅಪಾರ್ಟ್ಮೆಂಟ್ ನ ಸೂಪರ್ ಬಿಲ್ಡ್ ಅಪ್ ಏರಿಯಾವನ್ನು ಪರಿಗಣಿಸಿ ಲೆಕ್ಕ ಹಾಕಲಾಗುತ್ತದೆ.

ಸೂಪರ್ ಬಿಲ್ಡಪ್ ಏರಿಯಾ ಅಂದರೆ ಕಾರ್ಪೆಟ್ ಏರಿಯಾ, ಹೊರಭಾಗದ ಗೋಡೆಗಳ ಪ್ರದೇಶಗಳು, ನಿರ್ದಿಷ್ಟ ಅಪಾರ್ಟ್ಮೆಂಟ್ ನ ಪ್ರತ್ಯೇಕ ಬಾಲ್ಕನಿ ಏರಿಒಯಾಗಳು ಮತ್ತು ಕಾಮನ್ ಏರಿಯಾ, ಸೌಲಭ್ಯ ಸೌಕರ್ಯಗಳ ಪ್ರಮಾಣಾನುಗತ ಪಾಲನ್ನು ಒಳಗೊಂಡಿರಲಿದೆ.‌ ಎಲ್ಲಾ ಅಪಾರ್ಟ್ಮೆಂಟ್ ಗಳ ಒಟ್ಟು ಸೂಪರ್ ಬಿಲ್ಡ್ ಅಪ್ ಏರಿಯಾಗೆ ಒಂದು ಅಪಾರ್ಟ್ಮೆಂಟ್ ನ ಸೂಪರ್ ಬಿಲ್ಡ್ ಅಪ್ ಏರಿಯಾ ಅನುಪಾತದ ಆಧಾರದಲ್ಲಿ ಅವಿಭಜಿತ ಪಾಲನ್ನು ಹಂಚಲಾಗುತ್ತದೆ.‌

Category
ಕರಾವಳಿ ತರಂಗಿಣಿ