ಬೆಂಗಳೂರು : ಧರ್ಮಸ್ಥಳದಲ್ಲಿ ಕಳೆದ ಸುಮಾರು ದಿನಗಳಿಂದ ನಡೆಯುತ್ತಿದ್ದ ಶವಗಳ ಹೂತಿಟ್ಟ ಪ್ರಕರಣದ ಶೋಧ ಕಾರ್ಯವನ್ನು ಎಸ್ ಐಟಿ ನಿಲ್ಲಿಸಲು ನಿರ್ಧರಿಸಿದೆ. ದೂರುದಾರ ತಲೆಬುರುಡೆ ಹಿಡಿದು ನ್ಯಾಯಾಲಯಕ್ಕೆ ನೀಡಿದ ಮಾಹಿತಿ ಅನ್ವಯ ರಾಜ್ಯ ಸರ್ಕಾರ ನೇಮಿಸಿದ್ದ ಎಸ್ ಐಟಿ ಕಳೆದ ಒಂದು ತಿಂಗಳಿನಿಂದ ಧರ್ಮಸ್ಥಳದ ನೇತ್ರಾವತಿ ಸುತ್ತಮುತ್ತ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿತ್ತು. ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಎಸ್ ಐಟಿ ಶೋಧ ಕಾರ್ಯ ನಡೆಸಿದ್ದು, 6 ಮತ್ತು 11 ಎ ಸ್ಥಳಗಳಲ್ಲಿ ಕಳೇಬರದ ಆವಶೇಷಗಳು ಪತ್ತೆಯಾಗಿದ್ದು ಹೊರತುಪಡಿಸಿದರೆ ಉಳಿದೆಡೆ ಯಾವುದೇ ಕುರಿತು ಮತ್ತೆಯಾಗಿಲ್ಲ.
ಧರ್ಮಸ್ಥಳದಲ್ಲಿ ಶವಗಳ ಶೋಧ ಕಾರ್ಯ ಅಂತಿಮ ಘಟ್ಟ ತಲುಪುತ್ತಿರುವ ನಡುವೆ ಇನ್ನೂ ಕೆಲವರು ನಾವು ಶವಗಳನ್ನು ಹೂತಿದ್ದ ಜಾಗ ತೋರಿಸುವುದಾಗಿ ಮುಂದೆ ಬಂದಿದ್ದಾರೆ. ಅಲ್ಲದೇ ಇನ್ನೂ ಹಲವು ಪ್ರಕರಣಗಳು ಹೊರಗೆ ಬರುತ್ತಿವೆ. ಈ ನಡುವೆ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಎಸ್ ಐಟಿ 15 ದಿನಗಳ ಕಾಲ ಶೋಧ ಕಾರ್ಯ ನಿಲ್ಲಿಸಲು ನಿರ್ಧರಿಸಿದ್ದು, ಶನಿವಾರ ಸಂಜೆ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ನೇತೃತ್ವದಲ್ಲಿ ಎಸ್ ಐಟಿ ಸಭೆ ನಡೆಯಲಿದ್ದು, ಸಭೆಯ ನಂತರ ಮುಂದಿನ ನಡೆ ನಿರ್ಧರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ದೂರುದಾರ ಉತ್ಪನನ ಮುಂದುವರಿಸುವಂತೆ ಒತ್ತಡ ಹೇರುತ್ತಿದ್ದರೂ ತಿರಸ್ಕರಿಸಿರುವ ಎಸ್ ಐಟಿ, ಶೋಧ ಕಾರ್ಯ ನಿಲ್ಲಿಸಲು ನಿರ್ಧರಿಸಿದೆ. ಆದರೆ ಇದು ತಾತ್ಕಾಲಿಕವೇ ಅಥವಾ ಶಾಶ್ವತವಾಗಿ ತನಿಖೆ ನಿಲ್ಲಿಸುವುದೇ ಎಂಬುದು ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ನಿರ್ಧರವಾಗಲಿದೆ ಎಂದು ಮೂಲಗಳು ತಿಳಿಸಿವೆ.