image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೆಡಿಕಲ್ ಹಾಸ್ಟೆಲ್ ಗಳಲ್ಲಿ ಆತ್ಮಹತ್ಯೆ ನಿರೋಧಕ ಸಾಧನಗಳ ಅಳವಡಿಕೆ ಸಲಹೆ

ಮೆಡಿಕಲ್ ಹಾಸ್ಟೆಲ್ ಗಳಲ್ಲಿ ಆತ್ಮಹತ್ಯೆ ನಿರೋಧಕ ಸಾಧನಗಳ ಅಳವಡಿಕೆ ಸಲಹೆ

ಬೆಂಗಳೂರು: ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಮಿಮ್ಸ್)ಯ ಇಬ್ಬರು ವಿದ್ಯಾರ್ಥಿಗಳು ಕೇವಲ ಎರಡೇ ವಾರಗಳ ಅಂತರದಲ್ಲಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಜುಲೈ 22ರಂದು ಎಂಬಿಬಿಎಸ್ ವಿದ್ಯಾರ್ಥಿನಿ ಭರತ್ ಯತ್ತಿನಮಣಿ (22) ಮತ್ತು ಆಗಸ್ಟ್ 2ರಂದು ನರ್ಸಿಂಗ್ ವಿದ್ಯಾರ್ಥಿನಿ ನಿಷ್ಕಲಾ (21) ಎಂಬವರು ಮೃತಪಟ್ಟಿದ್ದರು. ಈ ಘಟನೆಗಳು ರಾಜ್ಯದ ವೈದ್ಯಕೀಯ ಹಾಸ್ಟೆಲ್‌ಗಳಲ್ಲಿರುವ ಸೀಲಿಂಗ್ ಫ್ಯಾನ್‌ಗಳಲ್ಲಿ ಆತ್ಮಹತ್ಯೆ ನಿರೋಧಕ ಸಾಧನಗಳನ್ನು ಅಳವಡಿಸುವುದು ಮತ್ತು ಇತರೆ ಗಂಭೀರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್ ಜಿಯುಹೆಚ್ ಎಸ್) ಗಂಭೀರವಾಗಿ ಚಿಂತಿಸುವಂತೆ ಮಾಡಿದೆ. ಆತ್ಮಹತ್ಯೆ ನಿರೋಧಕ ಸೀಲಿಂಗ್ ಫ್ಯಾನ್ ಸಾಧನವನ್ನು ನೇತಾಡುವ ಪ್ರಯತ್ನಗಳನ್ನು ತಡೆಯುವಂತೆ ತಯಾರು ಮಾಡಲಾಗಿದೆ. ಇದರ ಮೇಲೆ ಹೆಚ್ಚು ತೂಕ ಹಾಕಿದರೆ ಈ ಸಾಧನ ಫ್ಯಾನ್ ಅನ್ನು ಅದರ ಕೊಕ್ಕೆಯಿಂದ ಬೇರ್ಪಡಿಸಿ ನೆಲಕ್ಕೆ ಅಪ್ಪಳಿಸುವಂತೆ ಮಾಡುತ್ತದೆ. ಅಷ್ಟು ಮಾತ್ರವಲ್ಲ, ಸಮೀಪದಲ್ಲಿರುವ ಇತರರನ್ನು ಎಚ್ಚರಿಸಲು ಜೋರಾಗಿ ಸೈರನ್ ಮೊಳಗಿಸುತ್ತದೆ. ಈ ಕುರಿತು ಮಿಮ್ಸ್ ನಲ್ಲಿ ಪ್ರಾಯೋಗಿಕ ಪ್ರದರ್ಶನ ನಡೆದಿದೆ. ಇದಲ್ಲದೇ, ತನ್ನ ಮೇಲೆ ಹೆಚ್ಚು ಭಾರ ಬಿದ್ದಾಗ ದಿಢೀರ್ ಕುಸಿಯುವಂತಹ ಫ್ಯಾನ್‌ಗಳನ್ನು ಮೇಲ್ಛಾವಣಿಗಳಿಗೆ ಜೋಡಿಸುವ ಇತರ ವಿನ್ಯಾಸಗಳೂ ಚರ್ಚೆಯಲ್ಲಿವೆ.

ಡಾ.ಸಂಜೀವ್ ಅವರ ನೇತೃತ್ವದ ಆರ್ ಜಿಯುಹೆಚ್ ಎಸ್ ನ ಪಠ್ಯಕ್ರಮ ಅಭಿವೃದ್ಧಿ ಕೋಶವು ಜುಲೈ ತಿಂಗಳಾಂತ್ಯದಲ್ಲಿ ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಇಂಥದ್ದೊಂದು ಪ್ರಸ್ತಾವನೆಯನ್ನು ಸಿದ್ಧಪಡಿಸಲು ಮಿಮ್ಸ್ ಗೆ ಭೇಟಿ ನೀಡಿತ್ತು. ಆದರೆ ಇಂಥ ಸಾಧನಗಳನ್ನು ಅಳವಡಿಸಲು ಆಗುವ ವೆಚ್ಚ ಹಾಗು ಯೋಜನೆಯ ವಿವರಗಳು ಲಭ್ಯವಾಗಿಲ್ಲ. ಇಂಥ ಕ್ರಮವನ್ನು ಇತರೆ ಹಾಸ್ಟೆಲ್‌ಗಳಿಗೆ ವಿಸ್ತರಿಸುವ ಮೊದಲು ಮಿಮ್ಸ್ ನಲ್ಲಿ ಪ್ರಯೋಗಾತ್ಮಕವಾಗಿ ಅಳವಡಿಸುವ ಕುರಿತು ಚರ್ಚೆಗಳಾಗಿವೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿ, "ಮಂಡ್ಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಆತ್ಮಹತ್ಯೆ ಘಟನಾವಳಿಗಳು ನನಗೆ ತೀವ್ರ ಬೇಸರ ಮೂಡಿಸಿವೆ. ಒತ್ತಡ, ಆತಂಕ ಮತ್ತು ಮಾನಸಿಕ ಖಿನ್ನತೆಗಳಿಂದ ವಿದ್ಯಾರ್ಥಿಗಳು ಇಂಥ ನಿರ್ಧಾರ ತೆಗೆದುಕೊಳ್ಳುತ್ತಿರುವುದು ದುರದೃಷ್ಟಕರ. ಭವಿಷ್ಯದಲ್ಲಿ ಈ ರೀತಿಯ ಘಟನಾವಳಿಗಳನ್ನು ತಡೆಗಟ್ಟಲು ಮೆಡಿಕಲ್ ಹಾಸ್ಟೆಲ್ ಗಳ ಸೀಲಿಂಗ್ ಫ್ಯಾನ್‌ಗಳಿಗೆ ಆತ್ಮಹತ್ಯೆ ನಿರೋಧಕ ಸಾಧನಗಳೂ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಪರಿಶೀಲಿಸಲಾಗುತ್ತಿದೆ. ವೃತ್ತಿಪರ ಸಲಹೆಗಾರರನ್ನು ಹೊಂದಿರುವ ಸಮಾಲೋಚನಾ ಕೇಂದ್ರಗಳು ಈಗಾಗಲೇ ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳಾಗಬೇಕಿದೆ" ಎಂದರು.

 

Category
ಕರಾವಳಿ ತರಂಗಿಣಿ