ಬೆಂಗಳೂರು: ರಾಜ್ಯದಲ್ಲಿ ಸಂಜೆ ನ್ಯಾಯಾಲಯಗಳ ಸ್ಥಾಪನೆ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಹೊರಡಿಸಿದ್ದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಬೆಂಗಳೂರು ವಕೀಲರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಸ್ತಾವನೆ ಹಿಂಪಡೆಯಬೇಕು ಎಂದು ಆಗ್ರಹಿಸಿದೆ. ಈ ಸಂಬಂಧ ಬೆಂಗಳೂರು ನಗರ ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ಇತ್ತೀಚೆಗೆ ಪತ್ರ ಬರೆದಿರುವ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಕೀಲರ ಸಮುದಾಯವರು ವಾರದ ಏಳೂ ದಿನಗಳಲ್ಲಿಯೂ ಕೆಲಸ ಮಾಡುತ್ತಿದ್ದು, ನ್ಯಾಯಾಲಯ ಕಾರ್ಯನಿರ್ವಹಣೆ ದಿನಗಳಲ್ಲಿ ಸುಮಾರು 16 ಗಂಟೆಗಳ ಕಾಲ ಶ್ರಮಿಸುತ್ತಾರೆ. ಹೀಗಿರುವಾಗ ಸಂಜೆ ನ್ಯಾಯಾಲಯಗಳಿಗೆ ಸಮಯ ನೀಡುವುದಕ್ಕೆ ಸಾಧ್ಯವೇ ಇರುವುದಿಲ್ಲ. ವಕೀಲರು ಕುಟುಂಬ ಮತ್ತು ವೃತ್ತಿಯೊಂದಿಗೆ ಸಮತೊಲನ ಕಾಯ್ದುಕೊಳ್ಳುವುದು ಅಗತ್ಯವಿದ್ದು, ಸಂಜೆ ನ್ಯಾಯಾಲಯಗಳು ಪ್ರಾರಂಭವಾದಲ್ಲಿ ಕುಟುಂಬದತ್ತ ಹೆಚ್ಚು ಗಮನ ಹರಿಸುವುದಕ್ಕೆ ಕಷ್ಟ ಸಾಧ್ಯವಾಗಲಿದೆ.
ಪ್ರತಿದಿನ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನ್ಯಾಯಾಲಯದಲ್ಲಿದ್ದು, ಬಳಿಕ ಕಚೇರಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೈಕೋರ್ಟ್ ರಿಜಿಸ್ಟ್ರಾರ್ ಹೊರಡಿಸಿರುವ ಪ್ರಸ್ತಾವನೆಯು ಸಂಜೆ ಬಳಿಕವೂ ವಕೀಲರು ನ್ಯಾಯಾಲಯದ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ನಿರೀಕ್ಷಿಸಿದಂತಿದೆ. ಸಂಜೆ ಸಂದರ್ಭದಲ್ಲಿ ಕಕ್ಷಿದಾರರೊಂದಿಗೆ ಸಮಾಲೋಚನೆ ಮತ್ತು ಅರ್ಜಿಗಳ ಕರಡು ರಚನೆ ಕಾರ್ಯದಲ್ಲಿ ಎಲ್ಲ ವಕೀಲರು ತೊಡಗಿರುತ್ತಾರೆ. ದಿನಪೂರ್ತಿ ವಕೀಲ ವೃತ್ತಿ ಮಾಡಿದ ಬಳಿಕ ಸಂಜೆಯೂ ನ್ಯಾಯಾಲಯದ ಕಾರ್ಯ ಮುಂದುವರೆಸಿದಲ್ಲಿ ಅದು ಒತ್ತಡಕ್ಕೆ ಕಾರಣವಾಗಲಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಸಂಜೆ ನ್ಯಾಯಾಲಯಗಳ ಸ್ಥಾಪನೆ ಕುರಿತ ಪ್ರಸ್ತಾವನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಕೋರಿದ್ದಾರೆ.