ಹಾವೇರಿ : ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆಗೆ ಎಲ್ಲರೂ ಸಹಕಾರ ನೀಡುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಮನವಿ ಮಾಡಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಬುಧವಾರ ಸಂಜೆ ಧರ್ಮಸ್ಥಳದಲ್ಲಿ ನಡೆದ ಯುಟ್ಯೂಬರ್ ಮತ್ತು ಸ್ಥಳೀಯರ ಸಂಘರ್ಷದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ನಾನೇನು ಉತ್ತರ ಕೊಡುವುದಕ್ಕೆ ಆಗುತ್ತೆ, ತನಿಖೆಗೆ ಎಲ್ಲರೂ ಸಹಕಾರ ಮಾಡಬೇಕು ಅಂತ ಮಾತ್ರ ಹೇಳಬಲ್ಲೆ ಎಂದರು. ಸತ್ಯ ಇದ್ದರೆ ನ್ಯಾಯ ಸಿಗುತ್ತೆ, ಅಸತ್ಯ ಇದ್ದರೆ ಅವರು ಅಮಾಯಕರಾಗಿ ಸಾಬೀತಾಗುತ್ತಾರೆ. ಎಲ್ಲರೂ ಹೀಗೆ ಹೊಡೆದಾಡಿಕೊಂಡು, ಬಡಿದಾಡಿಕೊಂಡು ತಪ್ಪು ಸಂದೇಶವನ್ನು ಕಳುಹಿಸುವ ಅವಶ್ಯಕತೆ ಇಲ್ಲ. ಎಲ್ಲರಿಗೂ ತಾಳ್ಮೆ, ನಂಬಿಕೆ ಹಾಗೂ ವಿಶ್ವಾಸ ಇರಬೇಕು ಎಂದಷ್ಟೇ ಹೇಳಲು ಇಚ್ಛಿಸುತ್ತೇನೆ ಎಂದು ತಿಳಿಸಿದರು.
ಹಾವೇರಿ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಾರ್ಡ್ಗೆ ತೆರಳಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರು ವಿಚಾರಿಸಿದರು. ಸಖಿ ಕೇಂದ್ರಕ್ಕೆ ಭೇಟಿ ನೀಡಿ ತಾಯಿ ಮಗಳ ಆರೋಗ್ಯ ವಿಚಾರಿಸಿದ್ದೇನೆ. ಹಿರೇಕೆರೂರು ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಅಲ್ಲಿ ವೈದ್ಯರು ಇಲ್ಲ, ಕುಡಿಯುವ ನೀರು ಇಲ್ಲ. ತಾಲೂಕು ಆಸ್ಪತ್ರೆಯಲ್ಲಿ ಮಧ್ಯಾಹ್ನದ ಊಟ ಕೊಡುತ್ತಿಲ್ಲ, ಯಾಕೆ ಅಂತಾ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವಿಭಾಗದಲ್ಲಿ ವೈದ್ಯರ ಕೊರತೆ ಕುರಿತಂತೆ ಮಾತನಾಡಿದ ನಾಗಲಕ್ಷ್ಮಿ ಚೌಧರಿ, ಸರ್ಕಾರ ನೇಮಕಾತಿ ಮಾಡಲು ರೆಡಿ ಇದೆ. ಆದರೆ ಸೇರಿಕೊಳ್ಳುವವರು ಇಲ್ಲ ಎಂದು ತಿಳಿಸಿದರು. ಹಾವೇರಿ ತಾಯಿ ಮತ್ತು ಮಗು ಆಸ್ಪತ್ರೆ ಚೆನ್ನಾಗಿ ನಡೆಯುತ್ತಿದೆ. ಅಚ್ಚುಕಟ್ಟಾಗಿದೆ, ಸ್ವಚ್ಛವಾಗಿಟ್ಟುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಎಂಎಫ್ನ ಅಧ್ಯಕ್ಷರ ವಿರುದ್ದ ಅಲ್ಲಿನ ಮಹಿಳಾ ಸಿಬ್ಬಂದಿ ಮಹಾಮಂಡಳಿಗೆ ಪತ್ರ ಬರೆದಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಅದನ್ನು ಡಿಸಿ ಆಫೀಸ್ನಲ್ಲಿ ವಿಚಾರಿಸುತ್ತೇನೆ ಎಂದು ಹೇಳಿದರು.