image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನೈಋತ್ಯ ರೈಲ್ವೆಯ ಸರಕು ಸಾಗಣೆ ಮತ್ತು ಒಟ್ಟಾರೆ ಗಳಿಕೆಯಲ್ಲಿ ಏರಿಕೆ ದಾಖಲೆ

ನೈಋತ್ಯ ರೈಲ್ವೆಯ ಸರಕು ಸಾಗಣೆ ಮತ್ತು ಒಟ್ಟಾರೆ ಗಳಿಕೆಯಲ್ಲಿ ಏರಿಕೆ ದಾಖಲೆ

ಹುಬ್ಬಳ್ಳಿ: 2025-26ರ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ನೈಋತ್ಯ ರೈಲ್ವೆ (SWR) ಸರಕು ಸಾಗಣೆ ಮತ್ತು ಒಟ್ಟಾರೆ ಗಳಿಕೆ ಎರಡರಲ್ಲೂ ಗಮನಾರ್ಹ ಏರಿಕೆ ದಾಖಲಿಸಿದೆ. ಇದು ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಗ್ರಾಹಕ ಆಧಾರಿತ ತಂತ್ರಗಳ ಮೇಲಿನ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್​ನಿಂದ ಜುಲೈ 2025ರ ವರೆಗೆ, ನೈಋತ್ಯ ರೈಲ್ವೆಯು ಒಟ್ಟು 16.27 ಮಿಲಿಯನ್ ಟನ್ (MT) ಸರಕು ಸಾಗಣೆ ಮಾಡಿದ್ದು, ಇದು ಕಳೆದ ವರ್ಷದ ಇದೇ ಅವಧಿಯಲ್ಲಿನ 14.05 ಮಿಲಿಯನ್ ಟನ್​ಗಿಂತಲೂ ಶೇ.15.08% ಅಧಿಕವಾಗಿದೆ. ಈ 2.22 ಮಿಲಿಯನ್ ಟನ್​ಗಳ ಏರಿಕೆಯು, ನೈಋತ್ಯ ರೈಲ್ವೆಯು ತನ್ನ ಕಾರ್ಯಪದ್ಧತಿಗಳನ್ನು ಉತ್ತಮಗೊಳಿಸಿರುವುದು ಹಾಗೂ ಪ್ರಮುಖ ಕೈಗಾರಿಕೆಗಳೊಂದಿಗೆ ಉತ್ತಮ ಸಮ್ಮಿಲನ ಸಾಧಿಸಿರುವುದನ್ನು ತೋರಿಸುತ್ತದೆ. ಸಾಗಿಸಲಾದ ಪ್ರಮುಖ ಸರಕುಗಳಲ್ಲಿ, ಕಬ್ಬಿಣದ ಅದಿರು 6.41 ಮಿಲಿಯನ್ ಟನ್‌ಗಳ ಲೋಡಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ಇದು ಹಿಂದಿನ ವರ್ಷದ 5.54 ಮಿಲಿಯನ್ ಟನ್‌ಗಿಂತ ಶೇ. 15.08% ಹೆಚ್ಚಾಗಿದೆ. ಉಕ್ಕು ಲೋಡಿಂಗ್ ಅತ್ಯಂತ ವೇಗದಿಂದ ವೃದ್ಧಿಯಾಗಿ 3.54 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಇದು 2.49 ಮಿಲಿಯನ್ ಟನ್‌ನಿಂದ ಶೇ. 42.1% ಅಧಿಕವಾಗಿದೆ. ಕಲ್ಲಿದ್ದಲು ಸಾಗಣೆಯಲ್ಲೂ ಸಹ ಶೇ. 13.4% ಹೆಚ್ಚಾಗಿ 3.32 ಮಿಲಿಯನ್ ಟನ್ ತಲುಪಿದೆ.

ಉಕ್ಕಿನ ತಯಾರಿಕಾ ಘಟಕಗಳಿಗೆ ಕಚ್ಚಾ ವಸ್ತುಗಳಾದ (RMSP) 0.47 ಮಿಲಿಯನ್ ಟನ್‌ನಿಂದ ಶೇ. 51.4% ಹೆಚ್ಚಾಗಿ, 0.71 ಮಿಲಿಯನ್ ಟನ್ ಆಗಿದೆ. ಇದು ಶೇಕಡಾವಾರು ಏರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ರಸಗೊಬ್ಬರ ಲೋಡಿಂಗ್ ಕೂಡ 0.37 ಮಿಲಿಯನ್ ಟನ್‌ನಿಂದ ಶೇ. 12.6% ಏರಿಕೆ ಕಂಡು 0.42 ಮಿಲಿಯನ್ ಟನ್ ಆಗಿದೆ. ಕಂಟೇನರ್ ಸಾಗಣೆಯು 0.25 ಮಿಲಿಯನ್ ಟನ್‌ನಿಂದ ಶೇ. 29.4% ಏರಿಕೆಯಾಗಿ, 0.32 ಮಿಲಿಯನ್ ಟನ್‌ ಆಗಿದೆ. ಆದಾಯದ ವಿಷಯದಲ್ಲಿ, ನೈಋತ್ಯ ರೈಲ್ವೆ ಎಲ್ಲಾ ಪ್ರಮುಖ ಆದಾಯ ಶ್ರೇಣಿಗಳಲ್ಲಿಯೂ ಉತ್ತಮ ಬೆಳವಣಿಗೆ ದಾಖಲಿಸಿದೆ. ಪ್ರಯಾಣಿಕರ ಆದಾಯ ₹1,064 ಕೋಟಿ ಆಗಿದ್ದು, ಕಳೆದ ವರ್ಷದ ಅವಧಿಯಲ್ಲಿ ಪ್ರಯಾಣಿಸಿದ 55 ಮಿಲಿಯನ್ ಪ್ರಯಾಣಿಕರ ಜೊತೆಗೆ ಹೋಲಿಸಿದರೆ, ಈ ವರ್ಷ 59 ಮಿಲಿಯನ್ ಜನರು ಪ್ರಯಾಣಿಸಿದ್ದಾರೆ. ಕೋಚಿಂಗ್ ಸೇವೆಗಳಿಂದ, ಪಾರ್ಸೆಲ್ ಮತ್ತು ಇತರೆ ಪ್ರಯಾಣಿಕರಲ್ಲದ ಸೇವೆಗಳು ಸೇರಿ 113 ಕೋಟಿ ರೂ. ಗಳಿಕೆಯಾಗಿದೆ, ಇದು ಕಳೆದ ವರ್ಷದ 107 ಕೋಟಿ ರೂ. ಆಧಾರದ ಮೇಲೆ ಉತ್ತಮ ಸಾಧನೆಯಾಗಿದೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸರಕು ಸಾಗಣೆ ಆದಾಯವು ಒಟ್ಟಾರೆ ಗಳಿಕೆಗೆ ಪ್ರಮುಖ ಕೊಡುಗೆ ನೀಡುತ್ತಾ 1,716 ಕೋಟಿ ರೂ. ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,387 ಕೋಟಿ ರೂ.ಗಳಷ್ಟಿತ್ತು. ಇದು ಲಾಜಿಸ್ಟಿಕ್ಸ್ ನಿರ್ವಹಣೆಯಲ್ಲಿನ ಬಲವಾದ ಬೇಡಿಕೆ ಮತ್ತು ಕಾರ್ಯಾಚರಣೆಯ ದಕ್ಷತೆಯ ಪ್ರತಿಬಿಂಬವಾಗಿದೆ. ಬಾಡಿಗೆಗಳು, ಜಾಹೀರಾತುಗಳು ಮತ್ತು ಇತರ ವಿವಿಧ ಮೂಲಗಳಿಂದ ಬರುವ ಆದಾಯವನ್ನು ಒಳಗೊಂಡಿರುವ ವಿವಿಧ ಆದಾಯವು ಕಳೆದ ವರ್ಷದ 62 ಕೋಟಿ ರೂ.ಗಳಿಗೆ ಹೋಲಿಸಿದರೆ 79 ಕೋಟಿ ರೂ.ಗಳಿಗೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೈಋತ್ಯ ರೈಲ್ವೆ ಏಪ್ರಿಲ್​ನಿಂದ ಜುಲೈ 2025ರ ವರೆಗೆ 2,972 ಕೋಟಿ ರೂ.ಗಳ ಒಟ್ಟು ಆದಾಯವನ್ನು ಗಳಿಸಿದೆ. 2024ರಲ್ಲಿ ಇದೇ ಅವಧಿಯಲ್ಲಿ ಗಳಿಸಿದ 2,634 ಕೋಟಿ ರೂ.ಗಳಿಗಿಂತ 338 ಕೋಟಿ ರೂ.ಗಳ ಬೆಳವಣಿಗೆಯನ್ನು ದಾಖಲಿಸಿದೆ. ಈ ಸ್ಥಿರ ಮತ್ತು ವಿಶಾಲ ಆಧಾರಿತ ಕಾರ್ಯಕ್ಷಮತೆಯು ನೈಋತ್ಯ ರೈಲ್ವೆ ಆರ್ಥಿಕ ವಿವೇಕ, ಸುಧಾರಿತ ಸೇವಾ ವಿತರಣೆ ಮತ್ತು ಸರಕು ಮತ್ತು ಪ್ರಯಾಣಿಕ ವಲಯಗಳಲ್ಲಿ ಕಾರ್ಯತಂತ್ರದ ಬೆಳವಣಿಗೆಗೆ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ