image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚುನಾವಣಾ ಆಯೋಗದ ವಿರುದ್ಧ ಹೋರಾಟ ಮಾಡಬೇಕಿದೆ : ಡಿಸಿಎಂ ಡಿಕೆ ಶಿವಕುಮಾರ್​ ಕರೆ

ಚುನಾವಣಾ ಆಯೋಗದ ವಿರುದ್ಧ ಹೋರಾಟ ಮಾಡಬೇಕಿದೆ : ಡಿಸಿಎಂ ಡಿಕೆ ಶಿವಕುಮಾರ್​ ಕರೆ

ಬೆಂಗಳೂರು: “ನಮ್ಮ ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯವನ್ನು ಜನರಿಗೆ ಮನದಟ್ಟು ಮಾಡಬೇಕು. ನಮ್ಮ ಮತ, ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗಬೇಕು” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಆಗಸ್ಟ್ 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಭಾರತ್ ಜೋಡೋ ಭವನದಲ್ಲಿ ಬೆಂಗಳೂರು ವಲಯದ ನಾಯಕರು ಹಾಗೂ ಮುಖಂಡರ ಜೊತೆ ಬುಧವಾರ ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು “ಸದ್ಯ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುವಾಗ ಮತದಾನ, ಮತಗಟ್ಟೆ, ಮತದಾರರ ಪಟ್ಟಿ ಎಲ್ಲವೂ ಚರ್ಚೆಯಾಗುತ್ತಿದೆ. ನಮ್ಮ ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ವೇಳೆ ಮತದಾನದ ಅಕ್ರಮದ ಬಗ್ಗೆ ಸಂಶೋಧನೆ ಮಾಡಿದ್ದೆವು. ಬಿಜೆಪಿಯವರು ಚಿಲುಮೆ ಹಾಗೂ ಇತರೆ ಸಂಸ್ಥೆಗಳ ದುರ್ಬಳಕೆ ಮೂಲಕ ಅಕ್ರಮ ಮಾಡಲು ಮುಂದಾಗಿದ್ದರು. ಅದನ್ನು ನಾವು ಸಂಪೂರ್ಣವಾಗಿ ತಡೆಯಲು ಆಗಲಿಲ್ಲ. ಬಿಜೆಪಿಯವರು ತಮ್ಮ ಕಾರ್ಯಕರ್ತರಿಗೆ ಚುನಾವಣಾ ಆಯೋಗದ ಗುರುತಿನ ಚೀಟಿ ನೀಡಿ ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಅಕ್ರಮ ಎಸಗಿದ್ದರು. ಇದರಿಂದ ಬೆಂಗಳೂರಿನಲ್ಲಿ ಹೆಚ್ಚುಕಮ್ಮಿ ಆಗಿತ್ತು” ಎಂದು ಆರೋಪಿಸಿದರು.

“ವಿಧಾನಸಭೆ ಚುನಾವಣೆ ನಂತರ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಗೇಶ್ ಅವರ ಪುತ್ರ ನನ್ನನ್ನು ಭೇಟಿ ಮಾಡಿ ನನಗೆ ದೊಡ್ಡ ಮಾಹಿತಿ ನೀಡಿದ್ದರು. ಅದನ್ನು ನಾವು ಪರಿಶೀಲನೆ ಮಾಡಿದೆವು. ಅಷ್ಟು ಹೊತ್ತಿಗೆ ತಡವಾದ ಪರಿಣಾಮ ಅವರಿಗೆ ನ್ಯಾಯ ಒದಗಿಸಲು ಆಗಲಿಲ್ಲ. ನಂತರ ಲೋಕಸಭೆ ಚುನಾವಣೆಯಲ್ಲಿ ಇದೇ ರೀತಿ ನಡೆದಿದ್ದು, ನಮ್ಮ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಪರಿಶೀಲನೆ ಮುಂದುವರಿಸಿದ್ದಾರೆ. ಪಕ್ಷದ ವತಿಯಿಂದ ಇದನ್ನು ಅಧ್ಯಯನ ಮಾಡಿ ದೆಹಲಿಗೆ ತಲುಪಿಸಿದ್ದೇವೆ. ಇಲ್ಲಿ ಆಗಿರುವ ಅಕ್ರಮದ ಬಗ್ಗೆ ನಾನು ಬಿಡಿಸಿ ಹೇಳುವುದಿಲ್ಲ. ಈ ವಿಚಾರ ಯಾರ ಬಾಯಿಂದ ಬರಬೇಕೋ ಅವರಿಂದಲೇ ಬರಬೇಕು” ಎಂದು ತಿಳಿಸಿದರು. “ಇಡೀ ದೇಶದಲ್ಲಿ ಚುನಾವಣಾ ಅಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ ರಾಜ್ಯಗಳಲ್ಲಿ ಏನಾಗಿದೆ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು. ನಾನು ಈ ವಿಚಾರವಾಗಿ ಬಿಎಲ್ಎಗಳನ್ನು ಮಾಡಲು ಕೆಲವು ಎಂಎಲ್ ಸಿಗಳಿಗೆ ಜವಾಬ್ದಾರಿ ವಹಿಸಿದೆ. ಎಂಎಲ್ ಸಿ ಆಗುವಾಗ ಇರುವ ಆಸಕ್ತಿ ನಂತರ ಇರುವುದಿಲ್ಲ. ಕೆಲವು ಎಂಎಲ್ಎ ಅಭ್ಯರ್ಥಿಗಳಿಗೆ ಇದರ ಜವಾಬ್ದಾರಿ ವಹಿಸಿದೆ. ಕೆಲವರಿಗೆ ಚುನಾವಣೆ ನಂತರ ಆಸಕ್ತಿ ತೋರಲಿಲ್ಲ. ಕೆಲವರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ನಮ್ಮ ನಾಯಕರು ಖುದ್ದಾಗಿ ಬರುತ್ತಿದ್ದಾರೆ. ಗುರುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬರುತ್ತಿದ್ದಾರೆ. ಆಗಸ್ಟ್ 5ರಂದು ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿ ಮಾಡಲಿರುವ ರ್ಯಾಲಿಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ ವಿಚಾರವಾಗಿ ನಾನು ಒಂದಷ್ಟು ಸಲಹೆ ಕಳುಹಿಸಿಕೊಟ್ಟಿದ್ದೇನೆ” ಎಂದರು. “ನಮ್ಮ ರಾಷ್ಟ್ರೀಯ ನಾಯಕರು ಬಂದಾಗ ಬೆಂಗಳೂರು ನಗರ ವಿಭಾಗ ಬೆಂಗಳೂರು ದಕ್ಷಿಣ ಹಾಗೂ ಗ್ರಾಮಾಂತರ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಹಣ ಕೊಟ್ಟು ಯಾರನ್ನೂ ಕರೆದುಕೊಂಡು ಬರಬೇಡಿ. ಕಾರ್ಯಕರ್ತರು, ಮುಖಂಡರು, ಸಾರ್ವಜನನಿಕರು ಬಂದರೆ ಸಾಕು” ಎಂದು ಹೇಳಿದರು.

Category
ಕರಾವಳಿ ತರಂಗಿಣಿ