image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಯೂರಿಯಾ ಅಭಾವ ನೀಗಿಸಲು ಕೇಂದ್ರ ಸರಕಾರಕ್ಕೆ ಸಿದ್ದರಾಮಯ್ಯ ಪತ್ರ

ಯೂರಿಯಾ ಅಭಾವ ನೀಗಿಸಲು ಕೇಂದ್ರ ಸರಕಾರಕ್ಕೆ ಸಿದ್ದರಾಮಯ್ಯ ಪತ್ರ

ಬೆಂಗಳೂರು : ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ (urea fertilizer)ಅಭಾವ ಸೃಷ್ಟಿ ಆಗಿದೆ. ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಸಿಗದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪಳ, ಗದಗ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿದೆ. ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದು, ರಾಜ್ಯಕ್ಕೆ ಹಂಚಿಕೆಯಾದ ರಸಗೊಬ್ಬರ ಪ್ರಮಾಣವನ್ನು ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರವು 2025ರ ಖಾರಿಫ್ ಬೆಳೆಗೆ ರಾಜ್ಯಕ್ಕೆ 11,17,000 ಮೆಟ್ರಿಕ್ ಟನ್ ಯೂರಿಯಾ ಹಂಚಿಕೆ ಮಾಡಿದೆ. ಈವರೆಗೆ ಕೇವಲ 5,16,959 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಮಾಡಲಾಗಿದೆ. ಆದರೆ ಏಪ್ರಿಲ್‌ನಿಂದ ಜುಲೈವರೆಗೆ ರಾಜ್ಯಕ್ಕೆ 6,80,655 ಮೆಟ್ರಿಕ್ ಟನ್‌ ಯೂರಿಯಾದ ಅವಶ್ಯಕತೆ ಇದೆ. ಕೆಲ ರಸಗೊಬ್ಬರ ಕಂಪನಿಗಳು ಕೇಂದ್ರವು ಮಾಡಿದ ಹಂಚಿಕೆಯ ಪ್ರಕಾರ ಯೂರಿಯಾ ಗೊಬ್ಬರ ಪೂರೈಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿವೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಯೂರಿಯಾ ಪೂರೈಕೆಯ ತುರ್ತು ಅವಶ್ಯಕತೆಯಿದೆ. ಏಕೆಂದರೆ ಕರ್ನಾಟಕಕ್ಕೆ ಈ ವರ್ಷದ ಆರಂಭದಲ್ಲಿಯೇ ಮಾನ್ಸೂನ್ ಬಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ವಿವಿಧ ಬೆಳೆಗಳ ವ್ಯಾಪ್ತಿಯು ಹೆಚ್ಚಾಗಿದೆ. ತುಂಗಭದ್ರಾ, ಕಾವೇರಿ ಮತ್ತು ಕೃಷ್ಣಾ ನದಿಗಳ ಆಯಕಟ್ಟಿನ ಪ್ರದೇಶಗಳಲ್ಲಿ ನೀರನ್ನು ಮೊದಲೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮುಂಗಾರು ಆರಂಭಿಕ ಬಿತ್ತನೆ ಚಟುವಟಿಕೆ ಆರಂಭವಾಗಿದೆ. ಹೆಚ್ಚಿನ ಗೊಬ್ಬರ ಬಳಸುವ ಬೆಳೆಯಾದ ಮೆಕ್ಕೆಜೋಳದ ವಿಸ್ತೀರ್ಣವು ಸುಮಾರು 2 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚಾಗಿದೆ. ದ್ವಿದಳ ಧಾನ್ಯಗಳ ವಿಸ್ತೀರ್ಣವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಆಗಿದೆ ಎಂದಿದ್ದಾರೆ. 13,000 ಹೆಕ್ಟೇ‌ರ್ ಖಾರಿಫ್ ಪೂರ್ವ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಯೂರಿಯಾ ಕೊರತೆಯು ರೈತರಲ್ಲಿ ಅಶಾಂತಿ ಆತಂಕವನ್ನು ಸೃಷ್ಟಿಸುತ್ತಿದೆ. ರೈತರ ಹಿತದೃಷ್ಟಿಯಿಂದ ರಾಜ್ಯ ಹಂಚಿಕೆ ಪ್ರಕಾರ ರಸಗೊಬ್ಬರ ಪೂರೈಸಿ. ಬಾಕಿ ಕೊರತೆ ಇರುವ ಯೂರಿಯಾದ ಪೂರೈಕೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಅದೇ ರೀತಿಯಾಗಿ ಗದಗ ಜಿಲ್ಲೆಯಲ್ಲಿ ಕೂಡ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಪರದಾಡುವಂತಾಗಿದೆ. ನಗರದ ನಾಮಜೋಶಿ ರಸ್ತೆಯಲ್ಲಿನ ಗೋದಾಮಿಗೆ ಗೊಬ್ಬರಕ್ಕಾಗಿ ಬೆಳಗ್ಗೆಯಿಂದಲೇ ಮಕ್ಕಳು, ಮಹಿಳೆಯರು ಸೇರಿದಂತೆ ರೈತ ಕುಟುಂಬಗಳು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಜಿಲ್ಲೆಯಲ್ಲಿ ಮಳೆಯಾಗುತ್ತಿದೆ, ಆದರೆ ಗೊಬ್ಬರ ಸಿಗುತ್ತಿಲ್ಲಾ ಎಂದು ಕಿಡಿಕಾರಿದ್ದಾರೆ. ಗೋದಾಮಿನಲ್ಲಿ ಕೇವಲ 150 ರೈತರಿಗೆ ಮಾತ್ರ ಟೋಕನ್ ನೀಡುತ್ತಾರೆ. ಹೆಚ್ಚಿನ ಹಣ ಪಡೆದು ಯೂರಿಯಾ ಗೊಬ್ಬರ ಮಾರಾಟ ಆರೋಪ ಕೂಡ ಕೇಳಿಬಂದಿದೆ. ಗದಗ ಜಿಲ್ಲಾ ಕೇಂದ್ರದಲ್ಲಿಯೇ ರೈತರ ಶೋಷಣೆಯಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದು, ಸಮರ್ಪಕವಾಗಿ ಗೊಬ್ಬರ ವಿತರಿಸುವಂತೆ ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದಾರೆ.

Category
ಕರಾವಳಿ ತರಂಗಿಣಿ