ಬೆಂಗಳೂರು: ಬೇಡಿಕೆಗೆ ತಕ್ಕಷ್ಟು ಯೂರಿಯಾ ಸಿಗದೆ ರಾಜ್ಯದ ಹಲವೆಡೆ ರೈತರು ಪ್ರತಿಭಟನೆಗೆ ಮುಂದಾಗಿರುವ ನಡುವೆಯೇ “ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಇದೆ. ಸದ್ಯಕ್ಕೆ ನೂರಕ್ಕೆ ನೂರರಷ್ಟು ಸ್ಟಾಕ್ ಇಲ್ಲ. ಇರಾನ್, ಚೀನ ಕೂಡ ರಫ್ತು ನಿಲ್ಲಿಸಿದೆ' ಎಂದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ “ಬೇಡಿಕೆಗಿಂತ ಹೆಚ್ಚು ದಾಸ್ತಾನು ಇದ್ದು, ಗೊಬ್ಬರಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಇಲ್ಲ' ಎಂದು ಕೃಷಿ ಇಲಾಖೆ ಸ್ಪಷ್ಟನೆ ನೀಡುವ ಮೂಲಕ ರೈತರಲ್ಲಿ ಗೊಂದಲ ಮೂಡಿಸಿದೆ.
ಸಚಿವ ಚಲವರಾಯಸ್ವಾಮಿ ಮಂಡ್ಯದಲ್ಲಿ ಮಾತನಾಡಿ, ಎಪ್ರಿಲ್‌ನಿಂದ ಜುಲೈ ವರೆಗೆ 6.80 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇತ್ತು. ಈಗಾಗಲೇ 6.60 ಲಕ್ಷ ಮೆಟ್ರಿಕ್ ಟನ್ ಮಾರಾಟ ಮಾಡಿದ್ದೇವೆ. 1.94 ಲಕ್ಷ ಮೆಟ್ರಿಕ್ ಟನ್ ಮಾತ್ರ ದಾಸ್ತಾನು ಇದೆ ಎಂದರು. ರೈತರಿಗೆ ಸಮರ್ಪಕವಾಗಿ ಗೊಬ್ಬರ ಕೊಡುತ್ತೇವೆ, ಯಾರೂ ಒತ್ತಡಕ್ಕೆ ಒಳಗಾಗಬಾರದು. ಆತಂಕ ಪಡುವ ಆವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.ಜುಲೈ ತಿಂಗಳಿಗೆ ಅಗತ್ಯವಿರುವ ಯೂರಿಯಾ, ಡಿಎಪಿ ಗೊಬ್ಬರವನ್ನು ಈಗಾಗಲೇ ಆಯಾ ಜಿಲ್ಲೆಗಳಿಗೆ ಪೂರೈಸಲಾಗಿದೆ. ಬೇಡಿಕೆಗಿಂತ ಹೆಚ್ಚು ದಾಸ್ತಾನು ಇದ್ದು, ಸದ್ಯಕ್ಕೆ ಗೊಬ್ಬರಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಇಲ್ಲ. ಆದರೆ ರೈತರು ಬೆಳೆಗೆ ಅಗತ್ಯ ಇರುವಷ್ಟು ಮಾತ್ರ ಗೊಬ್ಬರ ಬಳಕೆ ಮಾಡಬೇಕು ಎಂದು ಕೃಷಿ ಇಲಾಖೆ ಮನವಿ ಮಾಡಿಕೊಂಡಿದೆ.