ಬೆಂಗಳೂರು: ಬೆಲೆ ಕುಸಿತದಿಂದ ಕಂಗೆಟ್ಟಿರುವ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸಿರುವ ಸರ್ಕಾರ ಈ ಹಿಂದಿನ ಆದೇಶವನ್ನು ಮಾರ್ಪಾಡು ಮಾಡಿ ಬೆಂಬಲ ಬೆಲೆಯೊಂದಿಗೆ ಪ್ರತಿ ಎಕರೆಗೆ 40 ಕ್ವಿಂಟಾಲ್‌ನಂತೆ ಗರಿಷ್ಠ 5 ಎಕರೆಗೆ 200 ಕ್ವಿಂಟಾಲ್‌ವರೆಗೆ ಮಿತಿಗೊಳಿಸಿ ಖರೀದಿಸಲು ಆದೇಶ ಹೊರಡಿಸಿದೆ. ಈ ಆದೇಶವು ಸದರಿ ಯೋಜನೆಯಡಿ ಈಗಾಗಲೇ ನೋಂದಾಯಿಸಿರುವ ರೈತರಿಗೂ ಸಹ ಅನ್ವಯವಾಗಲಿದೆ. ಪ್ರತಿ ಕೆ.ಜಿ.ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಲಾ 2 ರೂಪಾಯಿಗಳಂತೆ ಒಟ್ಟು 4 ರೂಪಾಯಿ ಬೆಂಬಲ ಬೆಲೆಯೊಂದಿಗೆ ಮಾವು ಖರೀದಿಗೆ ಜೂನ್ 25 ರಂದು ಆದೇಶ ಹೊರಡಿಸಿತ್ತು. ಈ ಆದೇಶದ ಅನ್ವಯ ಪ್ರತಿ ಎಕರೆಗೆ 20 ಕ್ವಿಂಟಾಲ್‌ನಂತೆ ಗರಿಷ್ಠ 5 ಎಕರೆಗೆ 100 ಕ್ವಿಂಟಾಲ್‌ವರೆಗೆ ಮಿತಿಗೊಳಿಸಲಾಗಿತ್ತು. ಇದೀಗ ಮಾರ್ಪಾಡು ಆದೇಶದಲ್ಲಿ ಈ ಮಿತಿಯನ್ನು 200 ಕ್ವಿಂಟಾಲ್‌ಗೆ ವಿಸ್ತರಿಸಲಾಗಿದೆ.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಖರೀದಿ ಮಿತಿ ವಿಸ್ತರಣೆ ಕುರಿತಂತೆ ಪತ್ರ ಬರೆದು ಕೇಂದ್ರಕ್ಕೂ ಮನವಿ ಮಾಡಿದ್ದು, ಖರೀದಿ ಕೇಂದ್ರಗಳಲ್ಲಿ ಅಗತ್ಯ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ. ಜೂನ್ 11 ಹಾಗೂ 13 ರಂದು ಎಂಐಎಸ್ (ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ) ಯೋಜನೆಯಡಿ ಮಾವು ಖರೀದಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಜ್ಯದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಜೂನ್ 25ರಂದು ಎಂಎಸ್ಐ ಯೋಜನೆಯಡಿ ಮಾವಿಗೆ ಬೆಂಬಲ ಬೆಲೆ ಘೋಷಿಸಿದ್ದರು. ಜೊತೆಗೆ 2025-26ನೇ ಸಾಲಿನ ಮಾರುಕಟ್ಟೆ ಋತುವಿನಲ್ಲಿ ಮಾವಿಗೆ ಪಿಡಿಪಿಎಸ್ ಯೋಜನೆ ಅನುಷ್ಠಾನಕ್ಕೂ ಸಮ್ಮತಿ ನೀಡಿದ್ದರು. ಆ ಯೋಜನೆಯಡಿ 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಕೇಂದ್ರದ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆಯ ಅಡಿಯಲ್ಲಿ 2025-26ರ ಸಾಲಿಗೆ ಅನ್ವಯವಾಗುವಂತೆ 2.5 ಲಕ್ಷ ಮೆಟ್ರಿಕ್ ಟನ್ ಮಾವನ್ನು, ಪ್ರತೀ ಕ್ವಿಂಟಾಲ್‌ಗೆ 1,616 ರೂ. ನಂತೆ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ನೀಡಿ, ಖರೀದಿಸುವುದಾಗಿ ಘೋಷಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ತೋತಾಪುರಿ ಮಾವಿನ ತಳಿ 500 ರಿಂದ 600 ರೂ.ಗೆ ಮಾರಾಟ ಆಗುತ್ತಿರುವುದರಿಂದ, ಕೇಂದ್ರ ಸರ್ಕಾರ, ಈ ಯೋಜನೆ ಅನುಷ್ಠಾನಕ್ಕಿರುವ ಮಾರ್ಗಸೂಚಿಗಳನ್ವಯ ಗರಿಷ್ಠ 1616 ರೂ. ನಿಗದಿಪಡಿಸಿದೆ. ಮಾತ್ರವಲ್ಲದೆ ಮಾರುಕಟ್ಟೆ ಮಧ್ಯಪ್ರವೇಶ ದರ ಹಾಗೂ ಪ್ರಚಲಿತ ಮಾರುಕಟ್ಟೆ ಧಾರಣೆ ಶೇ. 25ರ ಮಿತಿಯೊಳಗೆ ಇರಬೇಕು ಎಂಬ ನಿಯಮವಿದೆ. ಮಾರ್ಗಸೂಚಿಗಳ ಪ್ರಕಾರ, ಅಂದರೆ 1212 ರೂ. ನಿಂದ 1616 ರೂ.ವರೆಗಿನ ವ್ಯತ್ಯಾಸದ ಮೊತ್ತ ಮಾತ್ರ ಯೋಜನೆಯಡಿಯಲ್ಲಿ ರೈತರಿಗೆ ಪಾವತಿಸಬೇಕಾಗಿರುತ್ತದೆ. ಯೋಜನೆ ಅನುಷ್ಠಾನಕ್ಕೆ ಒಟ್ಟಾರೆ 2.5 ಲಕ್ಷ ಮೆಟ್ರಿಕ್ ಟನ್ಗೆ 101 ಕೋಟಿ ರೂ. ವೆಚ್ಚ ತಗುಲಲಿದೆ. ಆ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಭರಿಸಲಿವೆ.