ಬೆಂಗಳೂರು: ಧರ್ಮಸ್ಥಳದಲ್ಲಿ ಹಲವು ಮಹಿಳೆಯರು / ಹೆಣ್ಣು ಮಕ್ಕಳ ಮೃತ ದೇಹಗಳನ್ನು ವಿಲೇವಾರಿ ಮಾಡಿದ ಆರೋಪ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿರುವ ಪ್ರಕರಣದ ತನಿಖೆ ದಾರಿ ತಪ್ಪುತ್ತಿದ್ದು, ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಕೋರಿ ವಕೀಲರಾದ ಶ್ರೀರಾಮ್ ಟಿ. ನಾಯ್ಕ್ ಮತ್ತು ಪೊನ್ನಣ್ಣ ಟಿ ಎ ಎಂಬುವರು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದಾರೆ. ಪ್ರಕರಣದಲ್ಲಿನ ಆರೋಪಿಗಳು ಅತ್ಯಂತ ಪ್ರಭಾವಿಗಳಾಗಿದ್ದಾರೆ. ತನಿಖೆಗೆ ಪೂರ್ವಾಗ್ರಹ ಉಂಟಾಗುತ್ತಿದ್ದು, ನ್ಯಾಯಯುತ ತನಿಖೆಗಾಗಿ ಮಧ್ಯ ಪ್ರವೇಶ ಮಾಡಬೇಕು ಎಂದು ರಿಜಿಸ್ಟ್ರಾರ್‌ಗೆ ಬರೆದ ಪತ್ರದಲ್ಲಿ ಕೋರಿದ್ದಾರೆ. ಪ್ರಕರಣ ಸಂಬಂಧ ದೂರುದಾರ ನೀಡಿರುವ ಹೇಳಿಕೆಗಳನ್ನು ತನಿಖಾಧಿಕಾರಿಗಳು ಕೆಲವು ವ್ಯಕ್ತಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಡೆಸಿರುವ ಘಟನಾವಳಿಗಳು ತನಿಖಾ ಸಂಸ್ಥೆಯ ಮೇಲೆ ಅನುಮಾನಕ್ಕೆ ಕಾರಣವಾಗುತ್ತಿದೆ. ಆರೋಪಿ ಯಾರು ಎಂಬುದನ್ನು ಈವರೆಗೆ ತನಿಖೆಯಿಂದ ಬಹಿರಂಗ ಪಡಿಸಿಲ್ಲ. ಆದರೂ, ರಾಜ್ಯದ ಎಲ್ಲ ರಾಜಕೀಯ ವ್ಯಕ್ತಿಗಳು ಕೆಲವು ಪ್ರಭಾವಿಗಳ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾದ ತಕ್ಷಣ ಪ್ರಭಾವಿಗಳ ಪರ ವ್ಯಕ್ತಿಯೊಬ್ಬರು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದು ತನಿಖೆಯ ಮೇಲೆ ಸಂಶಯಕ್ಕೆ ಕಾರಣವಾಗಲಿದೆ. ತನಿಖೆಯನ್ನು ದಾರಿ ತಪ್ಪಿಸುವ ಸಾಧ್ಯತೆಯಿದ್ದು, ಅತ್ಯಾಚಾರ ಮತ್ತು ಕೊಲೆಯಂತಹ ಅಮಾನವೀಯ ಕೃತ್ಯಗೊಳಗಾದವರಿಗೆ ಅನ್ಯಾಯವಾದಂತಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣದಲ್ಲಿ ಅಪರಾಧ ಕೃತ್ಯವು ಅಪ್ರಾಪ್ತ ಮಕ್ಕಳ ವಿರುದ್ಧದ ಘೋರ ಕೃತ್ಯವಾಗಿದೆ. ಹೀಗಾಗಿ ತನಿಖಾ ಸಂಸ್ಥೆಗಳು ಎಚ್ಚರಿಕೆಯಿಂದ ಮುಂದುವರೆಯಬೇಕು. ಮೃತ ಶವಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಡಿಎನ್‌ಎ ಪರೀಕ್ಷೆಗೆ ಕಳುಹಿಸಬೇಕಾಗುತ್ತದೆ. ಈ ಹಿಂದೆ ದಾಖಲಾದಂತಹ ನಾಪತ್ತೆ ಪ್ರಕರಣಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ದೂರುದಾರರು ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆ ದಾಖಲಿಸಿ 17 ದಿನ ಕಳೆದಿದ್ದರೂ, ಈವರೆಗೂ ಯಾವುದೇ ಶವವನ್ನು ಹೊರತೆಗೆದು, ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮಾಡಿಲ್ಲ. ಅಧಿಕಾರಿಗಳ ವಿಳಂಬ ಧೋರಣೆ ಅಪರಾಧಿಗಳು ಶವಗಳನ್ನು ಹೊರತೆಗೆದು ಅವರ ವಿರುದ್ಧದ ಸಾಕ್ಷ್ಯಗಳನ್ನು ನಾಶಪಡಿಸುವುದಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಧರ್ಮಸ್ಥಳದಲ್ಲಿ ಬಾಲಕಿಯರು, ಅಪ್ರಾಪ್ತರು, ಭಿಕ್ಷುಕರು ಸೇರಿದಂತೆ ಹಲವರಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ದೂರು ನೀಡಿರುವವರ ಸಹಾಯದಿಂದ ಆ ಶವಗಳನ್ನು ಮಣ್ಣು ಮಾಡಲಾಗಿದೆ. ಇದೇ ಕಾರಣದಿಂದ ದೂರುದಾರರು 1995 ರಿಂದ 2014ರ ವರೆಗೂ ಜೀವ ಭಯದಿಂದ ತನ್ನ ಕುಟುಂಬಸ್ಥರೊಂದಿಗೆ ಬೇರೊಂದು ರಾಜ್ಯದಲ್ಲಿ ನೆಲೆಸುವಂತಾಗಿತ್ತು. ಆದ್ದರಿಂದ ತನಿಖಾ ಪ್ರಕ್ರಿಯೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಅವರು ತಮ್ಮ ಪತ್ರದಲ್ಲಿ ಕೋರಿದ್ದಾರೆ.