ಚಾಮರಾಜನಗರ: ಮೀಣ್ಯಂ ಅರಣ್ಯ ವಲಯದಲ್ಲಿ ಸಂಭವಿಸಿದ ಹುಲಿಗಳ ಅಸಹಜ ಸಾವಿನ ಪ್ರಕರಣದ ಬಳಿಕ ಮಲೆ ಮಹದೇಶ್ವರಬೆಟ್ಟ ವನ್ಯಧಾಮದ ಕಾಡಂಚಿನ ಗ್ರಾಮಗಳ ಹೈನುಗಾರರಿಗೆ ಸಂಕಷ್ಟ ಎದುರಾಗಿದ್ದು, ಜಾನುವಾರುಗಳು ಅರಣ್ಯದಂಚಿಗೂ ತೆರಳದಂತೆ ನಿರ್ಬಂಧ ಹೇರಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಭಾಗದ ಹಲವು ಗ್ರಾಮಗಳ ಜಾನುವಾರುಗಳು ಕಾಡಂಚಿನಲ್ಲಿ ಮೇಯುತ್ತಿದ್ದರೆ, ಅಂಥವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಮ್ಮೆಟ್ಟುತ್ತಿದ್ದಾರೆ. ಅಲ್ಲದೇ ಸಂಬಂಧಿಸಿದ ಜಾನುವಾರುಗಳ ಮಾಲೀಕರನ್ನು ಇನ್ನಿಲ್ಲದಂತೆ ಪ್ರಶ್ನಿಸಲಾಗುತ್ತಿದೆ ಎಂಬುದಾಗಿ ಆರೋಪಿಸಲಾಗುತ್ತಿದೆ.
ಮಲೆ ಮಹದೇಶ್ವರಬೆಟ್ಟ ವನ್ಯಧಾಮದೊಳಗೆ ಹಾಗೂ ಅದರ ಅಂಚಿನಲ್ಲಿ ಹಲವಾರು ಗ್ರಾಮಗಳಿದ್ದು, ತಲೆತಲಾಂತರಗಳಿಂದಲೂ ನಾವು ಇಲ್ಲೇ ವಾಸಿಸುತ್ತಿದ್ದೇವೆ. ಅರಣ್ಯದೊಂದಿಗೆ ನಮ್ಮದು ಅವಿನಾಭಾವ ಸಂಬಂಧ. ನಮ್ಮ ದೊಡ್ಡ ದನಗಳು ಅರಣ್ಯದಂಚಿನಲ್ಲೇ ಹುಲ್ಲುಮೇಯುವುದು ಈ ಹಿಂದಿನಿಂದಲೂ ನಡೆದು ಬಂದಿದೆ. ಹೀಗಿರುವಾಗ ಏಕಾಏಕಿ ಜಾನುವಾರುಗಳು ಹುಲ್ಲುಮೇಯಲು ನಿರ್ಬಂಧ ಹೇರಿದರೆ ಹೇಗೆ ಎಂಬುದು ಹೈನುಗಾರರ ಪ್ರಶ್ನೆ. ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಎಲ್ಲರಿಗೂ ತೊಂದರೆ ಕೊಡುವುದು ಸರಿಯಲ್ಲ. ಕಾಡು, ಕಾಡು ಪ್ರಾಣಿಗಳೊಂದಿಗೆ ನೂರಾರು ವರ್ಷಗಳಿಂದ ಇರುವ ನಮಗೆ ಹೀಗೆ ಏಕಾಏಕಿ ನಿರ್ಬಂಧ ಸರಿಯಲ್ಲಎಂಬುದು ರೈತರ ಆಕ್ಷೇಪ. ಪ್ರಾಣಿಗಳೊಂದಿಗೆ ನೂರಾರು ವರ್ಷಗಳಿಂದ ಇರುವ ನಮಗೆ ಹೀಗೆ ಏಕಾಏಕಿ ನಿರ್ಬಂಧ ಸರಿಯಲ್ಲಎಂಬುದು ರೈತರ ಆಕ್ಷೇಪ. ಈ ಭಾಗದ ರೈತರ ಬಳಿ ಸಾಕಷ್ಟು ಜಾನುವಾರುಗಳಿರುತ್ತವೆ. ಹೀಗಿರುವಾಗ ಎಲ್ಲವನ್ನೂ ಕೊಟ್ಟಿಗೆಯಲ್ಲಿ ಕಟ್ಟಿ ಮೇವು ನೀಡುವುದು ಕಷ್ಟ. ಹಿಂದಿನಿಂದಲೂ ನಾವು ಕಾಡಂಚಿಗೆ ಮೇಯಲು ಬಿಡುತ್ತೇವೆ. ಅವು ಸಹ ಹುಲ್ಲು ಮೇಯ್ದು ವಾಪಸ್ ದೊಡ್ಡಿಯೆಡೆಗೆ ಬರುತ್ತವೆ. ಇಂತಿರುವಾಗ ಒಂದು ಘಟನೆಯನ್ನು ನೆಪ ಮಾಡಿಕೊಂಡು ನಿರ್ಬಂಧ ಹೇರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ರೈತ ಮುಖಂಡ ಕೆ.ವಿ.ಮಾದೇಶ್.