image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕರ್ಮಯೋಗಿ ಮೋದಿ ವಿರುದ್ಧ ನಾಲಿಗೆ ಹರಿಬಿಡುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ- ಆರ್ ಅಶೋಕ್ ಟಾಂಗ್

ಕರ್ಮಯೋಗಿ ಮೋದಿ ವಿರುದ್ಧ ನಾಲಿಗೆ ಹರಿಬಿಡುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ- ಆರ್ ಅಶೋಕ್ ಟಾಂಗ್

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರೇ ಇನ್ನೊಮ್ಮೆ ನಾಲಿಗೆ ಹರಿಬಿಡುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ರಾಷ್ಟ್ರಸೇವೆಯನ್ನೇ ತನ್ನ ಜೀವನದ ಏಕೈಕ ಧೈಯವನ್ನಾಗಿಸಿಕೊಂಡು ಕರ್ಮಯೋಗಿಯಂತೆ ಶ್ರಮಿಸುತ್ತಿರುವ ಹಿಂದುಳಿದ ಸಮುದಾಯದ ಮೋದಿ ಅವರ ಅಪಾರ ಜನಪ್ರಿಯತೆ, ವಿಶ್ವದೆಲ್ಲೆಡೆ ಅವರಿಗೆ ಸಿಗುತ್ತಿರುವ ಅಭೂತಪೂರ್ವ ಗೌರವ, ಸನ್ಮಾನಗಳನ್ನು ಸಹಿಸದ ಕಾಂಗ್ರೆಸ್ ನಾಯಕರು ಹತಾಶೆಯಿಂದ ಮೋದಿ ಅವರ ಮೇಲೆ ವೈಯಕ್ತಿಕ ನಿಂದನೆ ಮಾಡುತ್ತಾ ಬಂದಿರುವುದು ಹೊಸದೇನಲ್ಲ ಎಂದು ಟೀಕಿಸಿದ್ದಾರೆ.

ಸೋನಿಯಾ ಗಾಂಧಿ ಆದಿಯಾಗಿ ಕಾಂಗ್ರೆಸ್ ಶಾಸಕರವರೆಗೂ ಅನೇಕರು 'ಮೌತ್ ಕಿ ಸೌದಾಗರ್' 'ರಾವಣ', 'ನೀಚ ವ್ಯಕ್ತಿ', 'ಚಹಾ ಮಾರುವವನು', 'ಮೋದಿ ಮೋದಿ ಎನ್ನುವ ಯುವಕರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು', 'ವಿಷಸರ್ಪ' ಎಂದೆಲ್ಲಾ ಮೋದಿ ಅವರನ್ನು ನಿಂದಿಸಿ ಕಾಂಗ್ರೆಸ್ ಪಕ್ಷದ ನೀಚ ಸಂಸ್ಕೃತಿಯನ್ನು ಪ್ರದರ್ಶನ ಮಾಡುತ್ತಲೇ ಇದ್ದಾರೆ. ಮೇಡಂ ಸೋನಿಯಾ ಗಾಂಧಿ ಹಾಕಿಕೊಟ್ಟ ಈ ಮೇಲ್ಪಂಕ್ತಿಯನ್ನು, ಈ ನೀಚ ಪರಂಪರೆಯನ್ನು ಮುಂದುವರೆಸುವುದೇ ತನ್ನ ಕರ್ತವ್ಯ ಎಂಬಂತೆ ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರು ನಿನ್ನೆ ಮೈಸೂರಿನ ಸಾಧನಾ ಸಮಾವೇಶದಲ್ಲಿ ಮೋದಿ ಅವರು 'ಬೊಗಳುತ್ತಾರೆ' ಎಂದು ಅವಾಚ್ಯ ಶಬ್ದ ಬಳಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷದ ಕೀಳು ಮನಸ್ಥಿತಿಯನ್ನು ಸ್ವಯಂ ಬಯಲು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸ್ವಾಮಿ ಖರ್ಗೆ ಅವರೇ, ನಿಮ್ಮ ಮೇಡಂ ಸೋನಿಯಾ ಗಾಂಧಿ ಅವರು ಮೋದಿ ಅವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದಾಗ 'ಮೌತ್ ಕಾ ಸೌದಾಗ‌ರ್' ಎಂದಿದ್ದರು. ಅದಾದ ಮೇಲೆ ಮೋದಿ ಅವರು ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಈಗ ಮೂರನೇ ಅವಧಿಗೆ ಪ್ರಧಾನಿಗಳಾಗಿದ್ದರೆ, ನಿಮ್ಮ ನಿಂದನೆ, ಬೈಗುಳಗಳು ನಿಮಗೇ ತಿರುಗುಬಾಣ ಆಗುತ್ತಿವೆ ಎಂದು ಅರ್ಥ ಆಗಲು ನಿಮಗೆ ಇನ್ನೂ ಎಷ್ಟು ವರ್ಷ ಬೇಕು ಸ್ವಾಮಿ?ಎಂದು ಪ್ರಶ್ನಿಸಿದ್ದಾರೆ.

ತಾವು ಹಿರಿಯರು, ರಾಜಕಾರಣದಲ್ಲಿ ವಿರೋಧಿಗಳನ್ನು ಹೇಗೆ ಸಂಬೋಧನೆ ಮಾಡಬೇಕು, ವಿರೋಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ತಮ್ಮ ನಡೆ-ನುಡಿಗಳ ಮೂಲಕ ತಾವು ಕಿರಿಯರಿಗೆ ಮಾದರಿಯಾಗಬೇಕು. ಅದು ಬಿಟ್ಟು ಹಿರಿಯರಾಗಿ ನೀವೇ ಈ ರೀತಿ ಪದೇ ಪದೇ ದೇಶದ ಪ್ರಧಾನಿಗಳನ್ನು ನಿಂದನೆ ಮಾಡಿದರೆ ಅದು ನಿಮಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.

ಮೋದಿ ಅವರು ಬೊಗಳುತ್ತಾರೋ ಇಲ್ಲವೋ ಅದು ನಿಮ್ಮ ಸಮಸ್ಯೆಯಲ್ಲ. ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವ ಮಟ್ಟದಲ್ಲಿ ಘರ್ಜನೆ ಮಾಡುತ್ತಿದೆಯಲ್ಲ, ಅದು ನಿಮ್ಮ ಸಮಸ್ಯೆ. ಭಾರತದ ಘರ್ಜನೆಯನ್ನು ಸಹಿಸಲಾಗದೆ ಮೋದಿ ಅವರನ್ನು ನಿಂದಿಸಿದರೆ ಜನ ಮೆಚ್ಚುತ್ತಾರಾ ಖರ್ಗೆ ಅವರೇ? ಇನ್ನೊಮ್ಮೆ ನಾಲಿಗೆ ಹರಿಬಿಡುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ನಡೆಸಿದ ಸಮಾವೇಶ ಸರ್ಕಾರಿ ಕಾರ್ಯಕ್ರಮ ಅಲ್ಲ. ಅದು ಡಿ.ಕೆ ಶಿವಕುಮಾ‌ರ್ ಅವರನ್ನು ಮುಗಿಸಲು ಮಾಡಿದ ಕಾರ್ಯಕ್ರಮ ಎಂದು ಆ‌ರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಇದು ಡಿಕೆಶಿ ಹಾಗೂ ಸಿದ್ದರಾಮಯ್ಯನವರ ಆಂತರಿಕ ಜಗಳ. ಬಿಜೆಪಿಗೆ ಸರ್ಕಾರವನ್ನು ಬೀಳಿಸುವ ಅಗತ್ಯವಿಲ್ಲ. ಈ ಸರ್ಕಾರ ಕಾಂಗ್ರೆಸ್‌ನ ಆಂತರಿಕ ಕಲಹದಿಂದಲೇ ಬಿದ್ದುಹೋಗಲಿದೆ ಎಂದರು.

Category
ಕರಾವಳಿ ತರಂಗಿಣಿ